ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ, ದಿನಾಂಕ 11-07-2026 ರಂದು ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರಿನ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ವಿಶೇಷ ಅದಾಲತ್ನಲ್ಲಿ ಒಂದೇ ದಿನದಲ್ಲಿ ಒಟ್ಟು 73,335 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ವಿವಿಧ ಪ್ರಕರಣಗಳ ವಿವರಗಳು:
ರಾಜಿಯಾಗಬಲ್ಲ ವಿವಿಧ ರೀತಿಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಈ ಕೆಳಗಿನಂತೆ ಬಗೆಹರಿಸಲಾಗಿದೆ:
- ಚೆಕ್ ಅಮಾನ್ಯ ಪ್ರಕರಣಗಳು (Section 138): 243
- ಬ್ಯಾಂಕ್/ಹಣ ವಸೂಲಾತಿ ಪ್ರಕರಣಗಳು: 12
- ಎಂ.ವಿ.ಸಿ (ವಾಹನ ಅಪಘಾತ ಪರಿಹಾರ) ಪ್ರಕರಣಗಳು: 82
- ಇತರೇ ಕ್ರಿಮಿನಲ್ ಪ್ರಕರಣಗಳು: 2,940
- ಇತರೇ ಸಿವಿಲ್ ಪ್ರಕರಣಗಳು: 273
- ವ್ಯಾಜ್ಯ ಪೂರ್ವ ಪ್ರಕರಣಗಳು (Pre-Litigation): 69,805
ಈ ಎಲ್ಲಾ ಪ್ರಕರಣಗಳನ್ನು ರಾಜಿ ಮುಖಾಂತರ ಇತ್ಯರ್ಥಪಡಿಸಲಾಗಿದ್ದು, ಒಟ್ಟು ರೂ. 21,06,68,649/- (ಇಪ್ಪತ್ತೊಂದು ಕೋಟಿ ಆರು ಲಕ್ಷದ ಅರವತ್ತೆಂಟು ಸಾವಿರದ ಆರುನೂರ ನಲವತ್ತೊಂಬತ್ತು ರೂಪಾಯಿಗಳು) ಪರಿಹಾರದ ಮೊತ್ತವನ್ನು ಘೋಷಿಸಲಾಗಿದೆ.
ಅದಾಲತ್ ಯಶಸ್ಸಿಗೆ ಸಹಕರಿಸಿದವರು:
ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ (ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು ಹಾಗೂ ಬ್ರಹ್ಮಾವರ), ಅಭಿಯೋಜನಾ ಇಲಾಖೆ, ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್ಗಳು, ಕಕ್ಷಿಗಾರರು ಹಾಗೂ ಇತರ ಸರ್ಕಾರಿ ಇಲಾಖೆಗಳ ಸಂಪೂರ್ಣ ಸಹಕಾರದೊಂದಿಗೆ ಈ ಲೋಕ ಅದಾಲತ್ ಅನ್ನು ಯಶಸ್ವಿಗೊಳಿಸಲಾಯಿತು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

