ಧಾರವಾಡ: ಧಾರವಾಡ ನಗರವನ್ನು ಬೆಚ್ಚಿಬೀಳಿಸಿರುವ ಭೀಕರ ಘಟನೆ ನಡೆದಿದ್ದು, ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಕಿರಣ್ ಹೊನ್ನಣ್ಣವರ್ ಹತ್ಯೆಯಾಗಿದ್ದಾರೆ. ಇದೇ ವೇಳೆ ಅವರ ಎಂಟು ವರ್ಷದ ಮಗುವಿನ ಮೇಲೂ ಚಾಕು ದಾಳಿ ನಡೆದಿದ್ದು, ಮಗು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ನಗರದ ರಂಕಾ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಡಾ. ಕಿರಣ್ ಹೊನ್ನಣ್ಣವರ್ ಅವರು ತಮ್ಮ ನಿವಾಸದಲ್ಲಿ ರಕ್ತದ ಮಡುವಿನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮತ್ತೊಂದು ಕೊಠಡಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಂಟು ವರ್ಷದ ಮಗ ನೇಹಿತ್ ಕಂಡುಬಂದಿದ್ದಾನೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಗಾಯಾಳು ಮಗುವನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ. ಸದ್ಯ ಮಗು ಚಿಕಿತ್ಸೆ ಪಡೆಯುತ್ತಿದ್ದು, ಅದರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ಪತ್ನಿ ಪ್ರಿಯಾಂಕಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಮತ್ತು ದಾಳಿಯ ಹಿಂದಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ಸತ್ಯಾಂಶ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ.
ಈ ಆಘಾತಕಾರಿ ಘಟನೆ ಧಾರವಾಡ ನಗರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

