ನವದೆಹಲಿ: ನ್ಯಾಯಾಲಯದ ಕಲಾಪಗಳ (Court Videos) ವೀಡಿಯೊ ಮತ್ತು ಆಡಿಯೊ ರೇಕಾರ್ಡಿಂಗ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನಿಯಂತ್ರಿತವಾಗಿ ಹಂಚಿಕೊಳ್ಳುತ್ತಿರುವುದನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಇದನ್ನು ನಿಯಂತ್ರಿಸಲಾಗದ ‘ಭೂತ’ ಎಂದು ಬಣ್ಣಿಸಿರುವ ನ್ಯಾಯಾಲಯವು, ಸಂಬಂಧಪಟ್ಟ ನ್ಯಾಯಾಲಯದ ಪೂರ್ವಾನ್ಮತಿಯಿಲ್ಲದೆ ಕಲಾಪದ ವೀಡಿಯೊಗಳನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಮಧ್ಯಂತರ ಆದೇಶ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದ್ದು, ನ್ಯಾಯಾಲಯದ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಅನುಮತಿ ಇಲ್ಲದೆ ವೀಡಿಯೊ ಪೋಸ್ಟ್ ಮಾಡುವಂತಿಲ್ಲ
ಕೋರ್ಟ್ ಕಲಾಪಗಳ ನೇರ ಪ್ರಸಾರ ಮತ್ತು ವೀಡಿಯೊ ಹಂಚಿಕೆಗೆ ತಡೆ ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ಸುಪ್ರೀಂ ಕೋರ್ಟ್ನ ಸೆಕ್ರೆಟರಿ ಜನರಲ್ ಅಥವಾ ಆಯಾ ಹೈಕೋರ್ಟ್ಗಳ ರಿಜಿಸ್ಟ್ರಾರ್ ಜನರಲ್ ಅವರ ಲಿಖಿತ ಅನುಮತಿಯಿಲ್ಲದೆ ಕಲಾಪದ ವೀಡಿಯೊಗಳನ್ನು ಕಟ್ ಮಾಡುವುದು, ಎಡಿಟ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಅಥವಾ ಅದರ ಮೂಲಕ ಹಣ ಗಳಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಆದರೆ, ಇದು ಮಾಧ್ಯಮಗಳ ಸುದ್ದಿ ವರದಿಗಾರಿಕೆಗೆ ಅನ್ವಯಿಸುವುದಿಲ್ಲ ಮತ್ತು ಇದು ಯಾವುದೇ ರೀತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಆದೇಶವಲ್ಲ ಎಂದೂ ನ್ಯಾಯಾಧೀಶರು ಸ್ಪಷ್ಟನೆ ನೀಡಿದ್ದಾರೆ.
’ನ್ಯಾಯಾಲಯ ಮನರಂಜನಾ ವಾಹಿನಿಯಲ್ಲ’
ವಿಚಾರಣೆ ವೇಳೆ ನ್ಯಾಯಮೂರ್ತಿ ಬಾಗ್ಚಿ ಅವರು, “ನ್ಯಾಯಾಲಯವು ಎಂದಿಗೂ 24 ಗಂಟೆಗಳ ಮನರಂಜನಾ ವಾಹಿನಿಯಾಗಲು ಸಾಧ್ಯವಿಲ್ಲ” ಎಂದು ಕಟುವಾಗಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ವಕೀಲರು ತಾವು ವಾದ ಮಂಡಿಸಿದ ದೃಶ್ಯಗಳನ್ನು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದಕ್ಕೆ ಸಹಮತ ವ್ಯಕ್ತಪಡಿಸಿದ ಕೋರ್ಟ್, ಇಂತಹ ಕ್ಲಿಪ್ಗಳ ಪ್ರಸಾರಕ್ಕೆ ಬ್ರೇಕ್ ಹಾಕಲೇಬೇಕಿದೆ ಎಂದಿತು.
ಕಲಾಪವನ್ನು ವೀಕ್ಷಿಸಲು ಇಚ್ಛಿಸುವ ಜನರು ಮುಂಚಿತವಾಗಿಯೇ ವಿನಂತಿ ಮಾಡಿಕೊಳ್ಳಬೇಕು ಹಾಗೂ ವರ್ಚುವಲ್ ವಿಚಾರಣೆಯ ಲಿಂಕ್ಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನೂ ನಿಯಂತ್ರಿಸಬೇಕು ಎಂದು ಅಭಿಪ್ರಾಯಪಟ್ಟ ಪೀಠವು, ಕೋರ್ಟ್ ವೀಡಿಯೊಗಳ ಹಂಚಿಕೆಗೆ ಸಂಬಂಧಿಸಿದಂತೆ ಮೆಟಾ (Meta) ಮತ್ತು ಎಕ್ಸ್ (X / Twitter) ನಂತಹ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೂ ನೋಟಿಸ್ ಜಾರಿ ಮಾಡಿದೆ.
ವಿಚಾರಣೆಯ ಸಂದರ್ಭದಲ್ಲಿ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಇತ್ತೀಚೆಗೆ ಅರ್ಜಿದಾರನೊಬ್ಬ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ಪೇಪರ್ ಎಸೆದು ನಿಂದಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ನ್ಯಾಯಾಂಗ ವ್ಯವಸ್ಥೆಯು ಹಾಸ್ಯದ ವಸ್ತುವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
AI ತಂತ್ರಜ್ಞಾನದ ದುರುಪಯೋಗ ಮತ್ತು ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆ
ಇದಕ್ಕೆ ಧ್ವನಿಗೂಡಿಸಿದ ತುಷಾರ್ ಮೆಹ್ತಾ ಅವರು, ಇತ್ತೀಚಿನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದಾಗಿ ನ್ಯಾಯಾಧೀಶರು ಅಥವಾ ವಕೀಲರು ಆಡದ ಮಾತುಗಳನ್ನು ಆಡಿದಂತೆ ಎಡಿಟ್ ಮಾಡಿ ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು.
ಇದೇ ವೇಳೆ ತಾವೇ ಖುದ್ದಾಗಿ ಎದುರಿಸಿದ ಸುಳ್ಳು ಸುದ್ದಿಯೊಂದರ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ತೀವ್ರ ಬೇಸರ ಹೊರಹಾಕಿದರು. ಇತ್ತೀಚೆಗೆ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದ ಅರ್ಜಿಯೊಂದರ ತುರ್ತು ವಿಚಾರಣೆಯನ್ನು ತಾವು ನಿರಾಕರಿಸಿದ್ದೇವೆ ಎಂದು ಮಾಧ್ಯಮಗಳು ಬೇಜವಾಬ್ದಾರಿಯಿಂದ ವರದಿ ಮಾಡಿವೆ. ಆದರೆ ವಾಸ್ತವದಲ್ಲಿ ಬೆಳಗಿನವರೆಗೆ ಯಾವುದೇ ಅಧಿಕೃತ ಅರ್ಜಿಯೇ ಸಲ್ಲಿಕೆಯಾಗಿರಲಿಲ್ಲ, ಕೇವಲ ಒಂದು ಮನವಿ ಪತ್ರ ಬಂದಿತ್ತಷ್ಟೇ. ಅದನ್ನು ರಿಟ್ ಅರ್ಜಿ ಎಂದು ಪರಿಗಣಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಸಿಜೆಐ, ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆತು ಸುಳ್ಳು ವರದಿಗಳನ್ನು ಬಿತ್ತರಿಸುತ್ತಿರುವುದು ದುರದೃಷ್ಟಕರ ಎಂದು ತರಾಟೆಗೆ ತೆಗೆದುಕೊಂಡರು.

