ಮಂಗಳೂರು: ಯುವಜನರು ಡ್ರಗ್ಸ್ ಜಾಲಕ್ಕೆ ಬೀಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ, ಪೊಲೀಸ್ ಅಧಿಕಾರಿಗಳು ಹಲವಾರು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ. ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಆದರೂ ಯುವ ಸಮಾಜವನ್ನು ದಾರಿ ತಪ್ಪಿಸಿ ಡ್ರಗ್ಸ್ಗೆ ದಾಸರನ್ನಾಗಿ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.
ಮಂಗಳೂರಿನಲ್ಲಿಯೂ ಡ್ರಗ್ಸ್ ನಶೆ ಜೋರಾಗಿಯೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಇಲ್ಲಿನ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಇದರ ಭಾಗವಾಗಿ ಜಿಲ್ಲೆಯ 16 ಪೊಲೀಸ್ ಠಾಣೆ ಗಳ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದ್ದ ಸುಮಾರು 82 ಕೋಟಿ ರೂ. ಗಳ ಮಾದಕ ವಸ್ತುಗಳನ್ನು ಪೊಲೀಸರು ನಾಶ ಮಾಡಿದ್ದಾರೆ.
ಅತ್ಯಂತ ಬೆಲೆಬಾಳುವ ಡ್ರಗ್ಸ್ಗಳು ಸೇರಿದಂತೆ ವಶಕ್ಕೆ ಪಡೆಯಲಾದ 82 ಕೋಟಿ ಬೆಲೆಬಾಳುವ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ. ಎಂಡಿಎಂಎ, ಭಾಂಗ್, ಗಾಂಜಾ, ಹೈಡ್ರೋ ವೀಡ್ ಗಾಂಜಾ, ಚರಸ್ ಮೊದಲಾದವುಗಳನ್ನು ನಾಶ ಮಾಡಲಾಗಿದೆ.
ಹಳೆಯ ಪ್ರಕರಣಗಳ ಡ್ರಗ್ಸ್ ನಾಶ ಮಾತ್ರವಲ್ಲದೆ ಈ ಬಾರಿಯೂ ಪೊಲೀಸರು ಡ್ರಗ್ಸ್ ಜಾಲಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈ ವರ್ಷ ಈ ವರೆಗೆ 87 ಪ್ರಕರಣಗಳು ದಾಖಲಾಗಿದ್ದು, 157 ಪೆಡ್ಲರ್ಗಳನ್ನು ಬಂಧಿಸಲಾಗಿದೆ. ಡ್ರಗ್ಸ್ ಸೇವನೆಗೆ ಸಂಬಂಧಿಸಿದ ಹಾಗೆ 463 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 8.18 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

