ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದ ಶ್ರೀರಾಮಲಲ್ಲಾ ಮೂರ್ತಿಯನ್ನು ಸುಂದರವಾಗಿ ಕೆತ್ತನೆ ಮಾಡಿದ ಕರ್ನಾಟಕದ ಕಲಾಕಾರ ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರು ಮತ್ತೊಂದು ಮಹತ್ವದ ಕೆತ್ತನೆಯಲ್ಲಿ ತೊಡಗಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಮೈಸೂರಿಗೆ ಆಗಸ್ಟ್ 1 ರಂದು ವಿವೇಕ ಸ್ಮಾರಕ ಉದ್ಘಾಟನೆಗೆ ಆಗಮಿಸಲಿದ್ದಾರೆ. ಅವರಿಗೆ ಉಡುಗೊರೆ ನೀಡುವ ಸಲುವಾಗಿ ಅರುಣ್ ಯೋಗಿರಾಜ್ ಅವರು 8.5 ಕೆ.ಜಿ. ತೂಕದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಕೆತ್ತನೆ ಮಾಡುತ್ತಿದ್ದಾರೆ.
ವಿವೇಕಾನಂದರ ಈ ಪ್ರತಿಮೆ ಏಕ ಅಮೃತಶಿಲೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಬಾಲ ವಿವೇಕಾನಂದರ ಪ್ರತಿಮೆ ಇದಾಗಿದೆ. ಈ ಕೆಲಸವನ್ನು ಅರುಣ್ ಅವರು ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಾನಂದ ಅವರ ಮನವಿಯ ಮೇರೆಗೆ ಕೆತ್ತನೆ ಮಾಡಿದ್ದು, 15 ದಿನಗಳಲ್ಲಿ ಇದರ ಕೆಲಸವನ್ನು ಅವರು ಪೂರ್ಣಗೊಳಿಸಿದ್ದಾರೆ.
ಅರುಣ್ ಯೋಗಿರಾಜ್ ಕೈಯಲ್ಲಿ ಅರಳಿದ ಈ ಪ್ರತಿಮೆಯನ್ನು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ ಸಲ್ಲಿಸಲಾಗುತ್ತದೆ. ಪ್ರಧಾನಿ ಮೋದಿ ಅವರು ಮೈಸೂರಿಗೆ ಬರುವುದು ಖಚಿತವಾದ ತಕ್ಷಣವೇ ಅರುಣ್ ಅವರಿಗೆ ಪ್ರತಿಮೆ ಕೆತ್ತುವ ಕೆಲಸ ವಹಿಸಲಾಗಿತ್ತು.

