ಉಡುಪಿ: ರೈಲ್ವೆ ನಿಲ್ದಾಣದಲ್ಲಿ ಒಂಟಿಯಾಗಿ ಸಿಕ್ಕಿಬಿದ್ದು, ಕಳೆದ ಕೆಲ ತಿಂಗಳುಗಳಿಂದ ಬಾಲಮಂದಿರದಲ್ಲಿದ್ದ ಪಶ್ಚಿಮ ಬಂಗಾಳ ಮೂಲದ 11 ವರ್ಷದ ಬಾಲಕನನ್ನು ಕೊನೆಗೂ ಆತನ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಕಾರ್ಕಳ ನಗರ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಸಂಪಾ ಶೆಟ್ಟಿ ಅವರ ಸಮಯಪ್ರಜ್ಞೆ ಮತ್ತು ಸಮಯೋಚಿತ ಮುತುವರ್ಜಿಯಿಂದಾಗಿ ಬಾಲಕ ತನ್ನ ಕುಟುಂಬವನ್ನು ಸೇರುವಂತಾಗಿದೆ.
ಘಟನೆಯ ವಿವರ:
ಜನವರಿ 2026 ರಲ್ಲಿ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಈ ಬಾಲಕ ಒಂಟಿಯಾಗಿ ಪತ್ತೆಯಾಗಿದ್ದ. ತನ್ನ ಪೋಷಕರ ಹೆಸರು ಹಾಗೂ ವಿಳಾಸ ತಿಳಿಸಲು ಬಾಲಕನಿಗೆ ಸಾಧ್ಯವಾಗದ ಕಾರಣ, ಆತನನ್ನು ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಬಾಲಕರ ಬಾಲಮಂದಿರಕ್ಕೆ ಸೇರಿಸಲಾಗಿತ್ತು.
ಬಿಕಟ್ಟಾದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಬಾಲಕನ ಪೋಷಕರನ್ನು ಹುಡುಕಲು ಮೌಖಿಕ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಅಧೀಕ್ಷಕರು ಹಾಗೂ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ಪುರ ಜಿಲ್ಲೆಯ ಗಂಗರಾಂಪುರ ಪೊಲೀಸ್ ಠಾಣೆಯ ಅಧಿಕಾರಿಗಳ ಸಹಕಾರದೊಂದಿಗೆ ತನಿಖೆ ಚುರುಕುಗೊಳಿಸಲಾಯಿತು.
ಕುಟುಂಬವನ್ನು ಪತ್ತೆ ಹಚ್ಚಿದ ‘ಸಂಪಾ ಶೆಟ್ಟಿ’:
ಪ್ರಕರಣದ ಜಾಡು ಹಿಡಿದ ಕಾರ್ಕಳ ನಗರ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಸಂಪಾ ಶೆಟ್ಟಿ ಅವರು, ಬಾಲಕನ ತಾಯಿ ಸಾಧನಾ ಮಂಡಲ್ ಪ್ರಸ್ತುತ ಮಹಾರಾಷ್ಟ್ರದ ಕಲ್ಯಾಣ್ ಜಿಲ್ಲೆಯ ಟಿಟ್ವಾಲದಲ್ಲಿದ್ದಾರೆ ಎಂಬ ಮಹತ್ವದ ಮಾಹಿತಿ ಕಲೆಹಾಕಿದರು. ತಕ್ಷಣವೇ ಅವರನ್ನು ಸಂಪರ್ಕಿಸಿ, ಬಾಲಕ ಸುರಕ್ಷಿತವಾಗಿರುವ ವಿಷಯವನ್ನು ತಿಳಿಸಿದರು.
ಪೋಷಕರ ವಶಕ್ಕೆ ಬಾಲಕ:
ಮಾಹಿತಿ ತಿಳಿದ ತಕ್ಷಣವೇ ಉಡುಪಿಗೆ ಆಗಮಿಸಿದ ಬಾಲಕನ ಪೋಷಕರು, ದಿನಾಂಕ 30/07/2026 ರಂದು ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾಗಿ ಸೂಕ್ತ ದಾಖಲೆಗಳನ್ನು ಒದಗಿಸಿದರು. ಮಗನನ್ನು ಪಡೆದ ಪೋಷಕರು ಆತನೊಂದಿಗೆ ಸ್ವಗ್ರಾಮಕ್ಕೆ ತೆರಳಿದ್ದಾರೆ.
ಮಗುವನ್ನು ಪೋಷಕರೊಂದಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳಾ ಪೊಲೀಸ್ ಸಿಬ್ಬಂದಿ ಸಂಪಾ ಶೆಟ್ಟಿ ಅವರ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

