ಶಿರ್ವ: ಮುಂಬೈನ ಸಬ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಶಿರ್ವದ ವ್ಯಕ್ತಿಯೊಬ್ಬರಿಗೆ ಅಪರಿಚಿತರು ಕರೆ ಮಾಡಿ 11 ಲಕ್ಷ ರೂ. ಪಂಗನಾಮ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ವಂಚನೆಗೊಳಗಾದ ವ್ಯಕ್ತಿ ವಿಲಿಯಂ ಪಾವ್ಲ್ ಕೊರೆಯಾ.
ವಿಲಿಯಂ ಅವರಿಗೆ ಜೂ. 28 ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾನೆ. ತನ್ನನ್ನು ಎಸ್ಐ ಎಂದು ಹೇಳಿಕೊಂಡ ಆತ ವಿಲಿಯಂ ಹೆಸರಿನಲ್ಲಿ ಒಂದು ನಕಲಿ ಸಿಮ್ ಕಾರ್ಯ ನಿರ್ವಹಿಸುತ್ತಿದ್ದರು, ಅದಕ್ಕೆ ಸಂಬಂಧಿಸಿ 20 ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾನೆ. ಮನಿ ಲಾಂಡ್ರಿಂಗ್ ಕೇಸಿನಲ್ಲಿ ವಿಲಿಯಂ ಹೆಸರಿರುವುದಾಗಿ ಹೆದರಿಸಿದ್ದಾನೆ. ಆರು ಜನ ಫೋಟೋ ಕಳುಹಿಸಿ ಅವರ ಪರಿಚಯ ಇದೆಯೇ ಎಂದು ಕೇಳಿದ್ದಾನೆ.
ವಿಲಿಯಂ ಅವರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹಣ ಕಳುಹಿಸುವಂತೆ ಹೇಳಿದ್ದಾನೆ. ಭಯದಿಂದ ವಿಲಿಯಂ ಅವರು ಎರಡು ಕಂತುಗಳಲ್ಲಿ 11 ಲಕ್ಷ ರೂ. ಪಾವತಿ ಮಾಡಿದ್ದಾರೆ. ಬಳಿಕ ತಾವು ವಂಚನೆಗೊಳಗಾಗಿರುವುದರ ಅರಿವಾಗಿ ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

