ಮಗು ಹುಟ್ಟಿದಾಗಿನಿಂದ ಆರು ತಿಂಗಳು ತುಂಬುವ ವರೆಗೆ ಅವರಿಗೆ ಕೇವಲ ತಾಯಿಯ ಎದೆ ಹಾಲು ಮಾತ್ರವೇ ನೀಡಬೇಕು. ಅದರ ಹೊರತಾಗಿ ನೀರನ್ನು ಸಹ ನೀಡಬಾರದು. ತಾಯಿಯ ಹಾಲಿನಲ್ಲಿ ಮಗುವಿಗೆ ಬೇಕಾದ ಪೋಷಕಾಂಶಗಳ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನುವುದು ಸತ್ಯ. ಅತ್ಯಂತ ಕಡಿಮೆ ಸನ್ನಿವೇಶಗಳಲ್ಲಿ, ಅತ್ಯಗತ್ಯ ಎನಿಸಿದಲ್ಲಿ ಮಾತ್ರವೇ ಮಗುವಿಗೆ ತಾಯಿಯ ಹಾಲಿನ ಹೊರತಾಗಿ ಬೇರೆ ಫಾರ್ಮುಲಾ ಹಾಲನ್ನು ನೀಡುವುದನ್ನು ವೈದ್ಯರು ಶಿಫಾರಸು ಮಾಡುತ್ತಾರೆ.
ಮಗುವನ್ನು ಪ್ರಸವಿಸಿದ ತಕ್ಷಣವೇ ಹಳದಿ ಬಣ್ಣದಲ್ಲಿ ತಾಯಿಯಲ್ಲಿ ಎದೆ ಹಾಲು ಬರಲಾರಂಭಿಸುತ್ತದೆ. ಈ ಹಾಲು ಮಗುವಿಗೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುತ್ತದೆ. ಇದನ್ನು ಮಗುವಿನ ಮೊದಲ ಲಸಿಕೆ ಎಂದು ಕರೆದರೂ ಅತಿಶಯವಲ್ಲ. ಈ ಹಾಲನ್ನು ಕೊಲೋಸ್ಟ್ರಮ್ ಎಂದು ಕರೆಯುತ್ತಾರೆ. ಇದು ಸೋಂಕು ಗಳಿಂದ ಮಗುವಿಗೆ ರಕ್ಷಣೆ ಒದಗಿಸುವ ಮಹತ್ವದ ಕೆಲಸವನ್ನು ಮಾಡುತ್ತದೆ.
ನವಜಾತ ಶಿಶುಗಳು ನಿಲ್ಲಿಸದೇ ಅಳುತ್ತಿದ್ದರೆ ಅದಕ್ಕೆ ಹಾಲು ಸಾಕಾಗುತ್ತಿಲ್ಲ ಎನ್ನುವುದೇ ಕಾರಣವಾಗಿರದು. ಬದಲಾಗಿ ಹಲವು ಕಾರಣಗಳು ಇರಬಹುದು. ಹಸಿವಿನ ಹೊರತಾಗಿ ನಿದ್ರೆ ಸರಿಯಾಗಿ ಆಗದೇ ಇರುವುದು, ಅಪ್ಪುಗೆಯ ಅವಶ್ಯಕತೆ, ಏನಾದರೂ ಅನಾರೋಗ್ಯವಿದ್ದರೂ ಮಗು ನಿಲ್ಲಿಸದೇ ಅಳುತ್ತದೆ.
ಹುಟ್ಟಿದ ನಂತರ ಕೆಲವು ಸಮಯದ ವರೆಗೆ ಮಗು ಆಗಾಗ್ಗೆ ಹಾಲು ಕುಡಿಯುವುದು ಸಾಮಾನ್ಯ ಸಂಗತಿ. ಮಗುವಿನ ತೂಕ ಏರಿಕೆ ಕಾಣುತ್ತಿದೆ, ಮಗು ಚೆನ್ನಾಗಿ ಮೂತ್ರ ವಿಸರ್ಜನೆ ಮಾಡುತ್ತಿದೆ ಎಂದಾದಲ್ಲಿ ಅದಕ್ಕೆ ಹಾಲು ಸಾಕಾಗುತ್ತಿದೆ ಎಂದೇ ಅರ್ಥ. ಈ ಎರಡೂ ಸರಿಯಾಗಿಲ್ಲ ಎಂದಾದಲ್ಲಿ ಮಕ್ಕಳ ತಜ್ಞರನ್ನು ಕಾಣಬೇಕು.
ತಾಯಿಗೆ ಅನಾರೋಗ್ಯ ಇದ್ದರೆ, ತಾಯಿ ಯಾವುದಾದರೂ ಔಷಧ ಸೇವನೆ ಮಾಡುತ್ತಿದ್ದರೆ ಮಗುವಿಗೆ ಹಾಲುಣಿಸಬಾರದು ಎಂಬ ವಿಷಯ ತಪ್ಪು. ತಾಯಿಯ ಹಾಲಿನ ಮೂಲಕ ಅಗತ್ಯ ಪ್ರತಿಕಾಯಗಳು ಮಗುವಿನ ದೇಹಕ್ಕೆ ಶಕ್ತಿ ನೀಡುತ್ತವೆ. ಆದ್ದರಿಂದ ಮಗುವಿಗೆ ನಿಶ್ಚಿಂತೆಯಿಂದ ಹಾಲುಣಿಸಿ. ಸಂದೇಹವಿದ್ದರೆ ವೈದ್ಯರ ಸಲಹೆ ಪಡೆಯಿರಿ.
ಫಾರ್ಮುಲಾ ಹಾಲು ತಾಯಿ ಹಾಲು ಮಗುವಿಗೆ ಸಾಕಾಗದ ಅಥವಾ ತಾಯಿ ಇಲ್ಲದೇ ಹೋದಾಗ ಮಾತ್ರವೇ ಪರ್ಯಾಯವಾಗಿ ಬಳಸಬೇಕು. ತಾಯಿಯ ಹಾಲಿಗೆ ಫಾರ್ಮುಲಾ ಹಾಲಿನ ಹೋಲಿಕೆ ಸಲ್ಲ. ಫಾರ್ಮುಲಾ ಹಾಲು ಮಗುವಿನ ಹೊಟ್ಟೆ ತುಂಬಿಸುತ್ತದೆ. ಆದರೆ ತಾಯಿ ಹಾಲು ಜೀವರಕ್ಷಕ ಪೋಷಕಾಂಶಗಳನ್ನು ಮಗುವಿಗೆ ಒದಗಿಸುತ್ತದೆ.
ತಾಯಿ ಹಾಲುಣಿಸಬೇಕಾದರೆ ಅವಳಿಗೆ ಕುಟುಂಬ ವರ್ಗದ ಸಹಕಾರವೂ ಅಷ್ಟೇ ಅಗತ್ಯ. ಅವಳ ಮಾನಸಿಕ, ದೈಹಿಕ ಆರೋಗ್ಯವನ್ನು ಕಾಪಿಟ್ಟುಕೊಳ್ಳುವಲ್ಲಿ ತಾಯಿಗೆ ಬೆಂಬಲ ನೀಡುವ ಕೆಲಸವನ್ನು ಕುಟುಂಬ ವರ್ಗ ಮಾಡಬೇಕು. ಅವಳಲ್ಲಿ ಹಾಲು ಉತ್ಪಾದನೆಯಾಗಲು ಪೂರಕ ಆಹಾರವನ್ನು ಒದಗಿಸಬೇಕು. ಅವಳಿಗೆ ಒತ್ತಡ ನೀಡುವುದಲ್ಲ, ಅವಳಿಗೆ ಒತ್ತಡವಿದ್ದರೆ ಅದನ್ನು ಶಮನ ಮಾಡಿ ಅವಳನ್ನು ಪ್ರೀತಿಸುವ ಕುಟುಂಬ ಜೊತೆಗಿದ್ದರೆ ಅವಳಿಗೆ ಮತ್ತಷ್ಟು ಚೈತನ್ಯ ಬರುತ್ತದೆ.

