ನವದೆಹಲಿ: ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ರಾಷ್ಟ್ರಗೀತೆಗೆ ನೀಡಲಾಗಿರುವ ಕಾನೂನಾತ್ಮಕ ರಕ್ಷಣೆಯನ್ನೇ ವಿಸ್ತರಿಸಿ, ಅದನ್ನು ಹಾಡುವುದಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು, ತಡೆಯುವುದನ್ನು ಅಪರಾಧವೆಂದು ಪರಿಗಣಿಸುವ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.
ಆ ಮೂಲಕ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ-2026 ಅಧಿಕೃತ ಕಾನೂನಾಗಿದೆ. ಈ ಕಾನೂನು ವಂದೇ ಮಾತರಂ ಗೀತೆಗೂ ರಾಷ್ಟ್ರಗೀತೆ ‘ಜನ ಗಣ ಮನ’ದಷ್ಟೇ ಸಮಾನ ಸ್ಥಾನಮಾನವನ್ನು ನೀಡುತ್ತದೆ.
ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆಯಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದನ್ನು ಅಥವಾ ಅಂತಹ ಗಾಯನದಲ್ಲಿ ನಿರತರಾಗಿರುವ ಸಭೆಗೆ ಅಡಚಣೆ ಉಂಟುಮಾಡುವುದನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಅಂತಹ ಅಪರಾಧಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿತ್ತು, ಹಾಗೆಯೇ ಎರಡನೇ ಮತ್ತು ನಂತರದ ಪ್ರತಿಯೊಂದು ಅಪರಾಧಕ್ಕೆ ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ವಂದೇ ಮಾತರಂ ಗೀತೆಯನ್ನು ಸಹ ಸದ್ಯ ಇದರದೇ ವ್ಯಾಪ್ತಿಗೆ ತರಲಾಗಿದೆ.

