ನವದೆಹಲಿ: ಯುಪಿಎಸ್ಸಿ ( ಕೇಂದ್ರ ಲೋಕಸೇವಾ ಆಯೋಗ) ದೆಹಲಿ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 124 ಪ್ರಾಂಶುಪಾಲ ಮತ್ತು 704 ಉಪ ಪ್ರಾಂಶುಪಾಲರ ಹುದ್ದೆಗಳು ಸೇರಿ ಒಟ್ಟು 828 ಹುದ್ದೆಗಳ ಭರ್ತಿಗೆ ಮುಂದಾಗಿದೆ. ನೇರ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳಿಗೆ ಆಗಸ್ಟ್ 14 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸಂದರ್ಶನ ಹಂತಕ್ಕೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ತಯಾರಿಸಲು UPSC ನ. 1ರಂದು ಕಂಬೈನ್ಡ್ ನೇಮಕಾತಿ ಪರೀಕ್ಷೆ (CRT) ನಡೆಸಲಿದೆ. ಸೂಚಿತ ಶೈಕ್ಷಣಿಕ ಅರ್ಹತೆ, ಅನುಭವ ಮತ್ತು ವಯಸ್ಸಿನ ಮಾನದಂಡಗಳನ್ನು ಒಳಗೊಂಡಿರುವ ಆಸಕ್ತರು UPSC ಆನ್ಲೈನ್ ನೇಮಕಾತಿ ಅರ್ಜಿ (ORA) ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಾಂಶುಪಾಲರ ಹುದ್ದೆಗೆ:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ.
- ಶಿಕ್ಷಣ ಪದವಿ (ಬಿ.ಎಡ್).
- ಮಾನ್ಯತೆ ಪಡೆದ ಶಾಲೆಯಲ್ಲಿ ಉಪ ಪ್ರಾಂಶುಪಾಲರು/ಸ್ನಾತಕೋತ್ತರ ಶಿಕ್ಷಕರು/ತರಬೇತಿ ಪಡೆದ ಪದವೀಧರ ಶಿಕ್ಷಕರಾಗಿ 10 ವರ್ಷಗಳ ಬೋಧನಾ ಅನುಭವ.
- ವಯೋಮಿತಿ: 50 ವರ್ಷಗಳು (UR/EWS), 53 ವರ್ಷಗಳು (OBC), 55 ವರ್ಷಗಳು (SC/ST), PwBD ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ.
ಉಪ ಪ್ರಾಂಶುಪಾಲರ ಹುದ್ದೆಗೆ:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ.
- ಶಿಕ್ಷಣ ಪದವಿ (ಬಿ.ಎಡ್)
- ಸ್ನಾತಕೋತ್ತರ ಶಿಕ್ಷಕರಾಗಿ ಎರಡು ವರ್ಷಗಳ ಅನುಭವ ಅಥವಾ ತರಬೇತಿ ಪಡೆದ ಪದವೀಧರ ಶಿಕ್ಷಕರಾಗಿ 3 ವರ್ಷಗಳ ಅನುಭವ.
- ವಯೋಮಿತಿ: 35 ವರ್ಷಗಳು (UR/EWS), 38 ವರ್ಷಗಳು (OBC), 40 ವರ್ಷಗಳು (SC/ST), PwBD ಅಭ್ಯರ್ಥಿಗಳಿಗೂ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.
ಯುಪಿಎಸ್ಸಿ ಅಧಿಕೃತ ಜಾಲತಾಣ upsconline.nic.in/ora ಗೆ ಭೇಟಿ ನೀಡಿ ಆಸಕ್ತರು ಅರ್ಜಿ ಸಲ್ಲಿಸಬಹುದು.

