ಹೆಬ್ರಿ: ಶಿವಪುರ ಗ್ರಾಮ ಪಂಚಾಯತ್ನಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ಮನೆ ತೆರಿಗೆ ಹಣವನ್ನು ಪಂಚಾಯತ್ ಬ್ಯಾಂಕ್ ಖಾತೆಗೆ ಜಮಾ ಮಾಡದೆ, ಸ್ವಂತಕ್ಕೆ ಬಳಸಿಕೊಂಡು ಹಣ ದುರ್ಬಳಕೆ ಹಾಗೂ ನಂಬಿಕೆ ದ್ರೋಹ ಎಸಗಿರುವ ಆರೋಪದ ಮೇಲೆ ಬಿಲ್ಲು ಕಲೆಕ್ಟರ್ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರು ನೀಡಿದ ದೂರಿನ ಪ್ರಕಾರ, ಪಂಚಾಯತ್ನಲ್ಲಿ ಬಿಲ್ಲು ವಸೂಲಿಗರನಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ ಎಂಬಾತ ಈ ವಂಚನೆ ಎಸಗಿದ್ದಾನೆ. ಆರೋಪಿಯು 2023-24 ನೇ ಸಾಲಿನಲ್ಲಿ ಸಂಗ್ರಹವಾದ ₹1,18,367 ರೂಪಾಯಿ ಹಾಗೂ 2024-25 ನೇ ಸಾಲಿನಲ್ಲಿ ಸಂಗ್ರಹವಾದ ₹3,36,021 ರೂಪಾಯಿ ಸೇರಿದಂತೆ ಒಟ್ಟು ₹4,54,388 ಮನೆ ತೆರಿಗೆ ಹಣವನ್ನು ಪಂಚಾಯತ್ ಬ್ಯಾಂಕ್ ಖಾತೆಗೆ ಜಮಾ ಮಾಡದೆ ತನ್ನ ಸ್ವಂತ ಲಾಭಕ್ಕಾಗಿ ಬಳಸಿಕೊಂಡಿದ್ದಾನೆ.
ಪಂಚಾಯತ್ಗೆ ಹಾಗೂ ಸಾರ್ವಜನಿಕರಿಗೆ ಮೋಸ ಮಾಡಿ ನಂಬಿಕೆ ದ್ರೋಹ ಎಸಗಿರುವ ಕುರಿತು ಪಿಡಿಒ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2026 ರಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 316(4), 318(2), 314 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 13 ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

