ಬೆಂಗಳೂರು: ಬಯೋಮೆಟ್ರಿಕ್ ನೀಡಿದ ತಕ್ಷಣವೇ ನ್ಯಾಯಬೆಲೆ ಅಂಗಡಿಗಳು ಕಾರ್ಡ್ದಾರರಿಗೆ ಪಡಿತರ ವಿತರಿಸಬೇಕು. ಇಲ್ಲವಾದರೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಆಹಾರ ವಸ್ತುಗಳ ವಿತರಣೆಯ ಸಂದರ್ಭದಲ್ಲಿ ನಡೆಯುವ ಅಕ್ರಮ ತಡೆಯ ಹಿನ್ನೆಲೆ ಇಲಾಖೆ ಈ ಸೂಚನೆ ನೀಡಿರುವುದಾಗಿದೆ.
ರಾಜ್ಯದ ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು, ತಿಂಗಳ ಕೆಲವು ದಿನಗಳಲ್ಲಿ ಮಾತ್ರ ಅಂಗಡಿ ತೆರೆಯುತ್ತವೆ. ಫಲಾನುಭವಿಗಳಿಂದ ಒಂದು ದಿನ ಬಯೋಮೆಟ್ರಿಕ್ ಪಡೆದು ಕೆಲವು ದಿನಗಳ ನಂತರ ಪಡಿತರ ಧಾನ್ಯ ನೀಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಬೆರಳಚ್ಚು ನೀಡಿದ ಒಂದೆರಡು ದಿನಗಳ ನಂತರ ಪಡಿತರ ನೀಡುವುದು ನಿಯಮಬಾಹಿರ. ಹಾಗಾಗಿ, ಕಾರ್ಡ್ದಾರರು ಬಯೋಮೆಟ್ರಿಕ್ ನೀಡಿದ ತಕ್ಷಣವೇ ಅವರಿಗೆ ಪಡಿತರ ಧಾನ್ಯ ವಿತರಿಸಬೇಕು ಎಂದು ಇಲಾಖೆ ಹೇಳಿದೆ.
ಬಯೋಮೆಟ್ರಿಕ್ ಪಡೆದು ಆಹಾರ ವಿತರಣೆಗೆ ತಡವಾದಲ್ಲಿ ಅಂತಹ ಅಂಗಡಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಪಡಿತರ ವಿತರಣೆಯಲ್ಲಿ ನ್ಯಾಯ ಬೆಲೆ ಅಂಗಡಿಗಳು ಪಾರದರ್ಶಕತೆ ಕಾಪಾಡುವಂತೆ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿವೆ.

