ಬೆಂಗಳೂರು: ಗುಟ್ಕಾ, ಪಾನ್ಮಸಾಲಾ ನಿಷೇಧ ವಿಷಯಕ್ಕೆ ಸಂಬಂಧಿಸಿದ ಹಾಗೆ ಸಚಿವ ಯು.ಟಿ. ಖಾದರ್ ಮಹತ್ವದ ಮಾಹಿತಿ ನೀಡಿದ್ದಾರೆ.
ನಿಕೋಟಿನ್, ತಂಬಾಕು ಅಂಶ ಹೊಂದಿರುವ ವಸ್ತುಗಳ ನಿಷೇಧದಿಂದ ರಾಜ್ಯದ ಅಡಿಕೆ ಬೆಳೆಗಾರರಿಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಹಾಗಾಗಿ ಸರ್ಕಾರ ಈ ಆದೇಶವನ್ನು ಹಿಂದಕ್ಕೆ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ವಿಧೈನಸೌಧದಲ್ಲಿ ಅವರು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಜನರ ಆರೋಗ್ಯದ ಹಿತದೃಷ್ಟಿಯಿಂದ ನಿಕೋಟಿನ್ ಹೊಂದಿರುವ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟದ ಮೇಲೆ ಒಂದು ವರ್ಷದ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಈ ತೀರ್ಮಾನಕ್ಕೂ ಅಡಿಕೆ ಬೆಳೆಗಾರರಿಗೂ ಯಾವುದೇ ಸಂಬಂಧವಿಲ್ಲ. ಸರ್ಕಾರ, ಆರೋಗ್ಯ ಇಲಾಖೆ ಅಡಿಕೆ ಬೆಳೆಗಾರರಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದ್ದಾರೆ.
ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ. ಗುಟ್ಕಾ ತಯಾರಕರು ನಮ್ಮ ದೇಶದ ಅಡಿಕೆಗಿಂತ ಹೆಚ್ಚಾಗಿ ನೇಪಾಳ ಮತ್ತು ಬಾಂಗ್ಲಾದೇಶದಿಂದ ಆಮದು ಮಾಡಿಕೊಂಡ ಅಡಿಕೆಯನ್ನು ಬಳಸುತ್ತಾರೆ. ಹೀಗಾಗಿ, ನಿಕೋಟಿನ್ ಯುಕ್ತ ಗುಟ್ಕಾ ನಿಷೇಧದಿಂದ ಮುಂದಿನ ದಿನಗಳಲ್ಲಿ ಸ್ಥಳೀಯ ಅಡಿಕೆ ಬೆಲೆ ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು ಎಂದು ಅಭಿಪ್ರಾಯ ವ್ತಕಪಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದು, ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಬೆಳೆಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಿಎಂ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿಡ್ದಾರೆ.
ಪಾನ್ ಮಸಾಲಾ ಮತ್ತು ಗುಟ್ಕಾ ನಿಷೇಧದ ಆದೇಶವನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಖಾದರ್, ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ. ಇನ್ನೂ ಎರಡು ಮೂರು ತಿಂಗಳು ಕಳೆದ ಬಳಿಕ ಅಡಿಕೆ ಬೆಲೆ ಏರಿಕೆಯಾದಾಗ ಈ ತೀರ್ಮಾನದ ವಾಸ್ತವ ಬೆಳೆಗಾರರಿಗೆ ಅರ್ಥವಾಗಲಿದೆ. ವ್ಯಾಪಾರಿಗಳ ಹಿತವನ್ನೂ ನಾವು ಕಾಪಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

