ಮಂಗಳೂರು: ಬೆಂಗಳೂರಿನ ಆಹಾರ ತಯಾರಿಕಾ ಸಂಸ್ಥೆಗಳ ಮೇಲೆ ದಾಳಿ ನಡೆದದ್ದು ಕಂಡ ಮೇಲೆಯೂ ಮಂಗಳೂರಿನಲ್ಲಿ ಅದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಅದು ಆಹಾರ ಮಾರಾಟ ಸಂಸ್ಥೆಗಳ ಬೇಜವಾಬ್ದಾರಿತನವಲ್ಲದೆ ಮತ್ತೇನಲ್ಲ ಎಂದು ಸಚಿವ ಯು. ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಸಾರ್ವಜನಿಕರಿಂದ ದೂರು ಬಂದ ತಕ್ಷಣವೇ ಪರಿಶೀಲನೆ ನಡೆಸಲು ಆಹಾರ ಮಾರಾಟ ಸಂಸ್ಥೆಗಳಿಗೆ ದಾಳಿ ನಡೆಸಿದ್ದಾರೆ. ಆರೋಗ್ಯಕರವಲ್ಲದ ಸ್ಥಿತಿಯಲ್ಲಿ ಆಹಾರಗಳನ್ನು ತಯಾರಿಸುವುದು ಕಂಡುಬಂದ ಹಿನ್ನೆಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗಿದ್ದು, ಪರಿಶೀಲನೆ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯಾವ ಸಂದರ್ಭದಲ್ಲಿ ಎಲ್ಲಿ ಬೇಕಾದರೂ ದಾಳಿ ನಡೆಯಬಹುದು. ಆದ್ದರಿಂದ ಸಂಸ್ಥೆಗಳು ಸ್ವಚ್ಛತೆ, ಗುಣಮಟ್ಟದ ಕಡೆಗೆ ಹೆಚ್ಚು ಗಮನ ನೀಡುವಂತೆ ಎಚ್ಚರಿಸಿದ್ದಾರೆ. ಎಷ್ಟೇ ದೊಡ್ಡ ಸಂಸ್ಥೆಯೇ ಆಗಲಿ ತಪ್ಪು ಮಾಡಿದರೆ ಬಿಡುವ ಮಾತೇ ಇಲ್ಲ. ನಮಗೆ ಸಾರ್ವಜನಿಕರ ಆರೋಗ್ಯ ಮುಖ್ಯ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕ್ಯಾಟರಿಂಗ್ ಉದ್ದಿಮೆಗಳ ಆಹಾರ ತಯಾರಿಕಾ ಸ್ಥಳಗಳು, ಪೇಯಿಂಗ್ ಗೆಸ್ಟ್ ಕೇಂದ್ರಗಳು ಹಾಗೂ ಹಾಸ್ಟೆಲ್ಗಳನ್ನೂ ತಪಾಸಣೆ ನಡೆಸಲಾಗುವುದು. ಸಂಬಂಧಪಟ್ಟ ಇತರ ಇಲಾಖೆಗಳ ಜತೆ ಚರ್ಚಿಸಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಲಾಗುವುದು ಎಂದಿದ್ದಾರೆ.
ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆ ಇರುವುದು ಸರ್ಕಾರದ ಗಮನದಲ್ಲಿದೆ. ಈ ರೀತಿಯ ತಪಾಸಣೆಗಳು ಹೆಚ್ಚಾದಂತೆ ಸರ್ಕಾರ ಹೊಸ ನೇಮಕಾತಿಗೆ ಅನುಮತಿ ನೀಡಲಿದೆ. ಸಿಬ್ಬಂದಿ ನೇಮಕಾತಿಯ ಜತೆಗೆ ವೈಜ್ಞಾನಿಕ ಪ್ರಯೋಗಾಲಯಗಳ ಅಗತ್ಯತೆಯ ಬಗ್ಗೆಯೂ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

