ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಹೆಸರು ಉಪಯೋಗಿಸಿ ಭಕ್ತ ಜನರನ್ನು ಮೋಸಗೊಳಿಸುವ ಯತ್ನ ನಡೆಯುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ.
ನಾಗರ ಪಂಚಮಿಯ ಹಿನ್ನೆಲೆ ರೂ. 750 ಮುಂಗಡ ಪಾವತಿ ಮಾಡಿದರೆ ಸೇವೆಗಳನ್ನು ದೇವರಿಗೆ ಸಲ್ಲಿಸಿ ಪ್ರಸಾದವನ್ನು ಕಳುಹಿಸಿಕೊಡಲಾಗುವುದು ಎಂದು ಹೇಳುವ ವಿಡಿಯೋ ಹರಿದಾಡುತ್ತಿದೆ.
ಈ ವಿಡಿಯೋದಿಂದ ಜನರು ಮೋಸ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಈ ಹಿಂದೆಯೂ ಕ್ಷೇತ್ರದ ಹೆಸರನ್ನು ಬಳಸಿಕೊಂಡು ವಂಚನೆಗೆ ಯತ್ನಿಸಿದ ಘಟನೆಗಳು ನಡೆದಿದ್ದವು. ಇಂತಹ ಕುಕೃತ್ಯಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಹೇಳಲಾಗಿದೆ.

