ಮಂಗಳೂರು: ಭಾರತೀಯ ಮಜ್ದೂರ್ ಸಂಘದ (BMS) ನೇತೃತ್ವದಲ್ಲಿ ಮಂಗಳೂರಿನ ರಾಜಾಜಿ ಪಾರ್ಕ್ನಲ್ಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಕನಿಷ್ಠ ಮಾಸಿಕ ವೇತನವನ್ನು 30,000 ರೂಪಾಯಿಗಳಿಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಲಾಯಿತು. ಜೊತೆಗೆ ಇಎಸ್ಐಸಿ (ESIC) ವೇತನ ಮಿತಿಯನ್ನು ಪ್ರಸ್ತುತ ಇರುವ 21,000 ರೂಪಾಯಿಗಳಿಂದ 42,000 ರೂಪಾಯಿಗಳಿಗೆ ಹಾಗೂ ಇಪಿಎಫ್ (EPF) ವೇತನ ಮಿತಿಯನ್ನು 15,000 ರಿಂದ 30,000 ರೂಪಾಯಿಗಳಿಗೆ ಹೆಚ್ಚಿಸಬೇಕು. ಇಎಸ್ಐ ಆಸ್ಪತ್ರೆಗಳ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೇವೆಗಳನ್ನು ಕೂಡಲೇ ಬಲಪಡಿಸಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಯಿತು.
ಇಪಿಎಸ್-95 ಯೋಜನೆ ಅಡಿಯಲ್ಲಿ ಕನಿಷ್ಠ ಪಿಂಚಣಿಯನ್ನು 7,500 ರೂಪಾಯಿಗಳಿಗೆ ಹೆಚ್ಚಿಸಿ, ತುಟ್ಟಿಭತ್ಯೆ (DA) ಮತ್ತು ಸಮಗ್ರ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಅದರೊಂದಿಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ, ಅಕ್ಷರ ದಾಸೋಹ ಹಾಗೂ ಎನ್ಎಚ್ಎಂ ಸೇರಿದಂತೆ ವಿವಿಧ ವರ್ಗಗಳ ನೌಕರರ ಗೌರವಧನ ಹೆಚ್ಚಿಸಿ ಸಾಮಾಜಿಕ ಭದ್ರತೆ ಹಾಗೂ ನಿವೃತ್ತಿ ಭದ್ರತೆ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.

