ಬೆಂಗಳೂರು: ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಒಂದೇ ಪ್ರಾಂಗಣದಲ್ಲಿ ಎಲ್.ಕೆ.ಜಿ ಯಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡರಲ್ಲೂ ಗುಣಾತ್ಮಕ ಶಿಕ್ಷಣ ನೀಡುವ, ಸ್ಮಾರ್ಟ್ ತರಗತಿ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಸಾವಿರ ಸುಸಜ್ಜಿತ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಇದನ್ನು ಹಂತಹಂತವಾಗಿ ಅನುಷ್ಠಾನ ಮಾಡಲಾಗುವುದು ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.
ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 500 ಕೆ.ಪಿ.ಎಸ್. ಶಾಲೆಗಳನ್ನು ನಿರ್ಮಿಸಿ ಲೋಕಾರ್ಪಣೆ ಗೊಳಿಸುವ ಉದ್ದೇಶ ಹೊಂದಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿಧಿಯಿಂದ ಉರ್ದು ಸೇರಿದಂತೆ ದ್ವಿಭಾಷಾ ಶಿಕ್ಷಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ 750 ಕೋಟಿ ರಾಜ್ಯ ಸರ್ಕಾರದ ಪೂರಕ ನಿಧಿ ಮತ್ತು ಏಷಿಯನ್ ಡೆವಲೆಪ್ಮೆಂಟ್ ಬ್ಯಾಂಕಿನ ಆರ್ಥಿಕ ನೆರವು ಸೇರಿದಂತೆ 1,750 ಕೋಟಿ ವೆಚ್ಚದಲ್ಲಿ ಮುಂದಿನ 4 ವರ್ಷಗಳ ಅವಧಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಸುಮಾರು 75,000 ಶಿಕ್ಷಕರ ಅಗತ್ಯವಿದ್ದು, ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

