ಉಡುಪಿ: ಜಗದೊಡೆಯ ಶ್ರೀಕೃಷ್ಣನ ಜನ್ಮಾಷ್ಟಮಿ ಅಂಗವಾಗಿ ತಿಂಗಳಿಡೀ ನಡೆಯುತ್ತಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೆಪ್ಟೆಂಬರ್ 4ರಿಂದ 6ರವರೆಗೆ ವಿಶೇಷ ಮೆರುಗು ದೊರೆಯಲಿದೆ ಎಂದು ಪರ್ಯಾಯ ಶಿರೂರು ಶ್ರೀ ವೇದವರ್ಧನ ತೀರ್ಥ ಶ್ರೀಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 4ರ ಮಧ್ಯರಾತ್ರಿ 12.12ಕ್ಕೆ ಶ್ರೀಕೃಷ್ಣನಿಗೆ ಅರ್ಥ್ಯ ಪ್ರದಾನ ನಡೆಯಲಿದ್ದು, 5ರಂದು ಮಹಾಪೂಜೆ, ಅನ್ನಸಂತರ್ಪಣೆ, ಹುಲಿವೇಷ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ 3.30ಕ್ಕೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ವಿಗ್ರಹದ ಭವ್ಯ ಮೆರವಣಿಗೆ ಹಾಗೂ ವಿಟ್ಲಪಿಂಡಿ ಉತ್ಸವದ ಅಂಗವಾಗಿ ಮಲ್ಲಯುದ್ಧ ಪ್ರದರ್ಶನ ನಡೆಯಲಿದೆ.
ಎರಡು ದಿನಗಳ ಕಾಲ ಹುಲಿವೇಷ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆಪ್ಟೆಂಬರ್ 6ರಂದು ಸಮಾರೋಪ ಸಮಾರಂಭದೊಂದಿಗೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಎಂದು ಶ್ರೀಗಳು ತಿಳಿಸಿದ್ದಾರೆ.

