ಉಡುಪಿ: ಕಾರ್ಕಳ ಹಾಗೂ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಸೆ.10ರಂದು ಕಾರ್ಕಳ ಗ್ರಾಮಾಂತರ ಪೊಲೀಸರು ಕಲ್ಯಾ ಗ್ರಾಮದ ಕ್ವಾರಿ ಬಳಿ ದಾಳಿ ನಡೆಸಿ, ಪರವಾನಿಗೆ ಇಲ್ಲದೆ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಆರೋಪದಡಿ ಮೂರು ಟಿಪ್ಪರ್ ಲಾರಿ ಹಾಗೂ ಒಂದು ಹಿಟಾಚಿ ವಶಪಡಿಸಿಕೊಂಡಿದ್ದಾರೆ.
ಇನ್ನು ಸೆ.11ರಂದು ಕಲ್ಯಾ ಗ್ರಾಮದ ಸಿಎಂಎಸ್ ಸ್ಟೋನ್ ಕ್ರಶರ್ಗೆ ದಾಳಿ ನಡೆಸಿ, ಪರವಾನಿಗೆ ಅವಧಿ ಮುಗಿದಿದ್ದರೂ ಅಕ್ರಮವಾಗಿ ಕಲ್ಲು ಪುಡಿ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ಕು ಟಿಪ್ಪರ್, ಮೂರು ಹಿಟಾಚಿ, ಒಂದು ಕ್ರಷರ್ ಯೂನಿಟ್ ಹಾಗೂ 20 ಲೋಡ್ ಜಲ್ಲಿ ಕಲ್ಲು ವಶಪಡಿಸಿಕೊಳ್ಳಲಾಗಿದೆ.
ಅದೇ ದಿನ ಪಡುಬಿದ್ರಿ ಪೊಲೀಸರು ಸಾಂತೂರು ಗ್ರಾಮದ ಕ್ರಷರ್ಗೆ ದಾಳಿ ನಡೆಸಿ 40 ಯುನಿಟ್ ಜಲ್ಲಿ, ಎರಡು ಲಾರಿ ಹಾಗೂ ಒಂದು ಜೆಸಿಬಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಹಾಗೂ ಪಡುಬಿದ್ರಿ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

