ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಾಯಿಸುವ ಕುರಿತು ಒಂದು ತಿಂಗಳೊಳಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದ 10ರಿಂದ 12 ಜಿಲ್ಲೆಗಳಲ್ಲಿ ಮುಂದಿನ 15 ತಿಂಗಳಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು. ಕರಾವಳಿ ಹಾಗೂ ಮಲೆನಾಡು ಭಾಗವನ್ನು ಒಳಗೊಂಡಂತೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಫಿಶರೀಸ್, ಮೆರೈನ್ ಹಾಗೂ ಬ್ಲೂ ಎಕಾನಮಿ ಕ್ಷೇತ್ರಗಳ ಅಭಿವೃದ್ಧಿ, ಬ್ಲೂ ಎಕಾನಮಿ ವಿಶ್ವವಿದ್ಯಾಲಯದ ಸೀಟುಗಳನ್ನು 60ರಿಂದ 200ಕ್ಕೆ ಹೆಚ್ಚಿಸುವುದು, ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಇದೇ ವೇಳೆ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಅನುದಾನಗಳನ್ನು ಘೋಷಿಸಲಾಗಿದೆ. ಮಲ್ಪೆ, ಕಾರವಾರ ವಿಮಾನ ನಿಲ್ದಾಣ, ಮಂಗಳೂರು-ಅತ್ರಾಡಿ-ಮರವೂರು ಸೇತುವೆ, ಕಟೀಲು ರಸ್ತೆ, ಮುಲ್ಕಿ ಭಾಗದ ಸೇತುವೆ ಹಾಗೂ ಪುತ್ತೂರು ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
ತುಳು ಭಾಷೆಗೆ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ಧ್ವನಿ ಎತ್ತಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

