ಉಡುಪಿ: ನಗರದ ಹನುಮಾನ್ ಗ್ಯಾರೇಜ್ ಹಿಂಭಾಗದಲ್ಲಿ ನಿಲ್ಲಿಸಲಾಗಿದ್ದ ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಖಾಸಗಿ ಬಸ್ಸನ್ನು ಕಳವು ಮಾಡಿದ್ದ ಪ್ರಕರಣವನ್ನು ಉಡುಪಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಭೇದಿಸಿದ್ದಾರೆ. ಕಳವಾಗಿದ್ದ ಬಸ್ಸನ್ನು ಮುದರಂಗಡಿ ಸಮೀಪದ ಮುದ್ದಾಡಿ ಎಂಬಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ.
ಘಟನೆಯ ವಿವರ:
ಕುಂದಾಪುರದ ಕಟ್ಬೆಳ್ಳೂರು ನಿವಾಸಿ ಕೃಷ್ಣ ಅವರು ಖಾಸಗಿ ಬಸ್ಸಿನಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಪ್ಟೆಂಬರ್ 28ರ ರಾತ್ರಿ ಸುಮಾರು 9:48ರ ವೇಳೆಗೆ ಚಾಲಕ ರಾಹೀಜ್ ಉಚ್ಚಿಲ ಅವರೊಂದಿಗೆ ಬಸ್ಸನ್ನು ಚಿತ್ಪಾಡಿಯ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದ ಗ್ಯಾರೇಜ್ ಬಳಿ ನಿಲ್ಲಿಸಿ, ರಾತ್ರಿ 10 ಗಂಟೆಗೆ ಇಬ್ಬರೂ ಅಲ್ಲಿಂದ ತೆರಳಿದ್ದರು.
ಮರುದಿನ ಬೆಳಿಗ್ಗೆ (ಸೆಪ್ಟೆಂಬರ್ 29) ಕರ್ತವ್ಯಕ್ಕೆ ಹಾಜರಾಗಲು ಸ್ಥಳಕ್ಕೆ ಬಂದಾಗ ಅಲ್ಲಿ ನಿಲ್ಲಿಸಲಾಗಿದ್ದ ಬಸ್ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಸ್ ನಿರ್ವಾಹಕ ಕೃಷ್ಣ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ತಕ್ಷಣವೇ ತನಿಖೆ ಚುರುಕುಗೊಳಿಸಿದರು. ಸೆಪ್ಟೆಂಬರ್ 29ರ ಮುಂಜಾನೆ ಸುಮಾರು 2 ಗಂಟೆಯ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಬಸ್ಸನ್ನು ಕದ್ದೊಯ್ದಿರುವುದು ಪತ್ತೆಯಾಗಿದೆ. ಬಳಿಕ ಬಸ್ ಮುದರಂಗಡಿ ಸಮೀಪದ ಮುದ್ದಾಡಿ ಎಂಬ ಹಾಡಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆಗಾಗಿ ಉಡುಪಿ ನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ.

