ಕಾರ್ಕಳ: ಹೊಸ ಮನೆ ನಿರ್ಮಾಣದ ವಿಚಾರವಾಗಿ ತಂದೆ-ಮಗನ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ತಂದೆಯೇ ಮಗನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರ್ನಲ್ಲಿ ನಡೆದಿದೆ.
ಕೇರಳ ಮೂಲದ ತ್ರೆಸಿಯಾಮ್ ಎಂಬವರು ತಮ್ಮ ಮನೆಯ ಸಮೀಪ ಹೊಸ ಮನೆಯನ್ನು ನಿರ್ಮಿಸುತ್ತಿದ್ದರು. ಈ ಮನೆ ತನಗೆ ಬಿಟ್ಟುಕೊಡಬೇಕು ಎಂದು ಅವರ ಪುತ್ರ ಚಾರ್ಲ್ಸ್ ಒತ್ತಾಯಿಸುತ್ತಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.
ಜಗಳ ಬಿಡಿಸಲು ತ್ರೆಸಿಯಾಮ್ ಅವರ ಪತಿ ಮಥಾಯಸ್ ಮಧ್ಯಪ್ರವೇಶಿಸಿದ್ದು, ಈ ವೇಳೆ ಚಾರ್ಲ್ಸ್ ಅವರನ್ನು ತಳ್ಳಿದ ಪರಿಣಾಮ ಮಥಾಯಸ್ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಬಳಿಕ ಹೊಸದಾಗಿ ನಿರ್ಮಿಸುತ್ತಿದ್ದ ಮನೆಯ ಶೆಡ್ ಮುಂದೆ ಮಥಾಯಸ್ ಕುಳಿತಿದ್ದಾಗ ಚಾರ್ಲ್ಸ್ ತಂದೆಯೊಂದಿಗೆ ಮತ್ತೆ ಜಗಳಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ. ಈ ವೇಳೆ ಅಲ್ಲೇ ಇದ್ದ ತೋಟದ ಕೆಲಸಕ್ಕೆ ಬಳಸುವ ಕತ್ತಿಯಿಂದ ತ್ರೆಸಿಯಾಮ್ ಅವರು ಚಾರ್ಲ್ಸ್ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಚಾರ್ಲ್ಸ್ನ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

