ಉಡುಪಿ: ತಾಲೂಕಿನ ಕೊಡವೂರು ಗ್ರಾಮದ ಕಡವಿನ ಬಾಗಿಲ ವಿಠೋಭ ರುಖುಮಾಯಿ ಭಜನಾ ಮಂದಿರದ ಬಳಿ ಗೂಡಂಗಡಿ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಬೆದರಿಸಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ರವಿವಾರ (ಅ. 04) ಮಧ್ಯಾಹ್ನ ಸಂಭವಿಸಿದೆ.
ಕಡವಿನ ಬಾಗಿಲ ನಿವಾಸಿ, ಕಳೆದ 50 ವರ್ಷಗಳಿಂದ ಗೂಡಂಗಡಿ ವ್ಯಾಪಾರ ನಡೆಸಿಕೊಂಡು ಬರುತ್ತಿರುವ ವಿಠಲ ಸುವರ್ಣ ದರೋಡೆಗೊಳಗಾದ ವ್ಯಕ್ತಿ.
ರವಿವಾರದಂದು ಎಂದಿನಂತೆ ಗೂಡಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದಾಗ, ಮಧ್ಯಾಹ್ನ ಸುಮಾರು 01:00 ಗಂಟೆಯ ವೇಳೆಗೆ ಮೋಟಾರು ಸೈಕಲ್ನಲ್ಲಿ ಬಂದ ಇಬ್ಬರು ಅಪರಿಚಿತರು ಅಂಗಡಿಯ ಸ್ವಲ್ಪ ಮುಂದೆ ಬೈಕ್ ನಿಲ್ಲಿಸಿದ್ದಾರೆ.
ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಅಂಗಡಿಗೆ ಬಂದು ‘ವಿಮಲ್’ ಕೇಳಿ, 20 ರೂಪಾಯಿ ಹಣವನ್ನು ಡಬ್ಬಿಯ ಪಕ್ಕದಲ್ಲಿ ಇಟ್ಟಿದ್ದಾನೆ. ಈ ವೇಳೆ ವಿಠಲ ಸುವರ್ಣ ಅವರು ಡಬ್ಬಿಯಿಂದ ವಿಮಲ್ ತೆಗೆದುಕೊಡಲು ಮುಂದಾದಾಗ, ಆ ಅಪರಿಚಿತ ವ್ಯಕ್ತಿ ಏಕಾಏಕಿ ಅವರ ಮೇಲೆ ಎರಗಿ ಬಲವಂತವಾಗಿ ಒತ್ತಿ ಹಿಡಿದಿದ್ದಾನೆ. ಬಳಿಕ ವಿಠಲ ಸುವರ್ಣ ಅವರ ಕುತ್ತಿಗೆಯಲ್ಲಿದ್ದ ಒಂದೂವರೆ ಪವನ್ ತೂಕದ ಚಿನ್ನದ ಸರವನ್ನು ಬಲವಂತವಾಗಿ ಎಳೆದುಕೊಂಡು, ದೂರದಲ್ಲಿ ನಿಂತಿದ್ದ ಮೋಟಾರು ಸೈಕಲ್ ಏರಿ ಸವಾರನೊಂದಿಗೆ ಪರಾರಿಯಾಗಿದ್ದಾನೆ.
ಈ ಕುರಿತು ಸಂತ್ರಸ್ತ ವಿಠಲ ಸುವರ್ಣ ಅವರು ನೀಡಿದ ದೂರಿನನ್ವಯ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 110/2026, ಭಾರತೀಯ ನ್ಯಾಯ ಸಂಹಿತೆ (BNS) ಯ ಕಲಂ 309(4) ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

