ಬೆಂಗಳೂರು (ಅಕ್ಟೋಬರ್ 12): ಪ್ರಮುಖ ರಾಜ್ಯಪಾಲರ ಹುದ್ದೆಗಳ ಮರುಹಂಚಿಕೆಯ ಭಾಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು 6 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಡಿ ಪ್ರಸ್ತುತ ಕೇರಳದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿಗೆ ವರ್ಗಾಯಿಸಲಾಗಿದ್ದು, ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಇನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ಮಾಜಿ ಸಂಸದೆ ಡಾ. ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಸುಧಾ ಯಾದವ್ ಅವರು ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 1999ರಿಂದ 2002ರವರೆಗೆ ವಿ.ಎಸ್. ರಮಾದೇವಿ ಅವರು ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
2021ರಲ್ಲಿ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ಬರೋಬ್ಬರಿ 5 ವರ್ಷಗಳ ಬಳಿಕ ರಾಜ್ಯದಲ್ಲಿ ರಾಜ್ಯಪಾಲರ ಬದಲಾವಣೆ ಮಾಡಲಾಗಿದ್ದು, ಈ ಬಾರಿ ರಾಜ್ಯದ ಉನ್ನತ ಸಾವಿಧಾನಿಕ ಹುದ್ದೆಗೆ ಮಹಿಳೆಯನ್ನು ಆಯ್ಕೆ ಮಾಡಲಾಗಿದೆ. ಹರಿಯಾಣದ ರೇವಾರಿ ಜಿಲ್ಲೆಯ ಮೊಟ್ಲಾ ಕಲನ್ ಗ್ರಾಮದವರಾದ ಸುಧಾ ಯಾದವ್ ಅವರು ಐಐಟಿ ರೂರ್ಕಿಯಿಂದ ಎಂಎಸ್ಸಿ ಪದವಿ ಪಡೆದಿದ್ದು, ಕೆಮಿಸ್ಟ್ರಿಯಲ್ಲಿ ಪಿಎಚ್ಡಿ ಮುಗಿಸಿದ್ದಾರೆ.

