ಮುಂಬೈ:ಎನ್ಎಂಸಿ ಹೆಲ್ತ್ಕೇರ್ (NMC Healthcare) ಸಂಸ್ಥಾಪಕ ಹಾಗೂ ಭಾರತೀಯ ಮೂಲದ ಖ್ಯಾತ ಉದ್ಯಮಿ ಬಿ.ಆರ್. ಶೆಟ್ಟಿ (BR Shetty) ಅವರು ಬಾಂಬೆ ಹೈಕೋರ್ಟ್ನಲ್ಲಿ ಬ್ಯಾಂಕ್ ಆಫ್ ಬರೋಡಾ (Bank of Baroda) ಸೇರಿದಂತೆ ಹಲವರ ವಿರುದ್ಧ ಬರೋಬ್ಬರಿ 15 ಬಿಲಿಯನ್ ಡಾಲರ್ ಅಂದರೆ ಸುಮಾರು 1.44 ಲಕ್ಷ ಕೋಟಿ ರೂ. ಮೊರೆ ಮೊಕದ್ದಮೆ ಹೂಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಷೇರುಪೇಟೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಷೇರು ಮೌಲ್ಯವು ಇಂದಿನ ವಹಿವಾಟಿನಲ್ಲಿ ಶೇ. 3ರಷ್ಟು ಕುಸಿತ ಕಂಡಿದೆ. ನಿನ್ನೆ 238 ರೂ. ಇದ್ದ ಷೇರುಬೆಲೆ ಇಂದು 229 ರೂ.ಗಳಿಗೆ ಇಳಿದಿದೆ.
ಯುಎಇಯಲ್ಲಿ ಅತಿ ದೊಡ್ಡ ಉದ್ಯಮಿಗಳಲ್ಲಿ ಒಬ್ಬರಾಗಿ ಬೆಳೆದಿದ್ದ ಎನ್ಎಂಸಿ ಹೆಲ್ತ್ಕೇರ್ ಮತ್ತು ಯುಎಇ ಎಕ್ಸ್ಚೇಂಜ್ನ ಸಂಸ್ಥಾಪಕ ಬಿ.ಆರ್. ಶೆಟ್ಟಿ, ತಮಗಾದ ವ್ಯಾಪಕ ನಷ್ಟಗಳಿಗೆ ಪರಿಹಾರ ಕೋರಿ ಈ ಬೃಹತ್ ಕಾನೂನು ಸಮರ ಸಾರಿದ್ದಾರೆ. ಬ್ಯಾಂಕ್ ಆಫ್ ಬರೋಡಾ ಹಾಗೂ ಅದರ ಕೆಲವು ಅಧಿಕಾರಿಗಳು ತಮ್ಮ ಗ್ರೂಪ್ ಕಂಪನಿಗಳಿಗೆ ಸಂಬಂಧಿಸಿದ ವಂಚನೆಯ ವಹಿವಾಟುಗಳಿಗೆ ಸಹಕರಿಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಸಪ್ಲೈಯರ್ಗಳೆನ್ನಲಾದವರ ಖಾತೆಗಳ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದ್ದು, ಅಕ್ರಮ ಹಣ ವರ್ಗಾವಣೆ ದೂರುಗಳನ್ನು ಪರಿಶೀಲಿಸುವಲ್ಲಿ ಬ್ಯಾಂಕ್ ವಿಫಲವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ತಮ್ಮ ಸಹಿಯನ್ನು ನಕಲುಗೊಳಿಸಿ ಸಿದ್ಧಪಡಿಸಲಾದ ನಕಲಿ ಪರ್ಸನಲ್ ಗ್ಯಾರಂಟಿಗಳನ್ನು ಬಳಸಿ ಸಾಲಗಳನ್ನು ಪಡೆಯಲಾಗಿದೆ ಎಂದು ಬಿ.ಆರ್. ಶೆಟ್ಟಿ ಆಪಾದಿಸಿದ್ದಾರೆ. ಈ ಸಂಬಂಧ ಬ್ಯಾಂಕ್ ದಾಖಲೆಗಳು ಹಾಗೂ ಆಂತರಿಕ ನಿಯಮಗಳ ಕಡತಗಳನ್ನು ಬಹಿರಂಗಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಬಿ.ಆರ್. ಶೆಟ್ಟಿ ಅವರ ಈ ಎಲ್ಲಾ ಆರೋಪಗಳನ್ನು ಬ್ಯಾಂಕ್ ಆಫ್ ಬರೋಡಾ ಸಾರಾಸಗಟಾಗಿ ತಳ್ಳಿಹಾಕಿದೆ. ತಮಗೆ ಈವರೆಗೆ ಯಾವುದೇ ಅಧಿಕೃತ ಮೊಕದ್ದಮೆಯ ಪ್ರತಿ ತಲುಪಿಲ್ಲ ಎಂದಿರುವ ಬ್ಯಾಂಕ್, ದಾಖಲೆಗಳು ಕೈ ಸೇರಿದ ಬಳಿಕ ಕಾನೂನುಬದ್ಧವಾಗಿ ಸಮರ್ಥವಾಗಿ ಉತ್ತರಿಸುವುದಾಗಿ ಸ್ಪಷ್ಟಪಡಿಸಿದೆ. 2024ರ ಜುಲೈನಲ್ಲಿ ನ್ಯೂಯಾರ್ಕ್ನಲ್ಲಿ ಬಿ.ಆರ್. ಶೆಟ್ಟಿ ಅವರು ಹೂಡಿದ್ದ ಇದೇ ರೀತಿಯ ಮೊಕದ್ದಮೆ ವಜಾಗೊಂಡಿದ್ದನ್ನು ಬ್ಯಾಂಕ್ ಸ್ಮರಿಸಿದ್ದು, ಬಾಂಬೆ ಹೈಕೋರ್ಟ್ನಲ್ಲೂ ತಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದೆ.
ಮತ್ತೊಂದೆಡೆ, ಬಿ.ಆರ್. ಶೆಟ್ಟಿ ಅವರಿಂದ ಬ್ಯಾಂಕಿಗೆ ಬರಬೇಕಿರುವ ಅಂದಾಜು ₹2,800 ಕೋಟಿಗಳಷ್ಟು ಸಾಲದ ಬಾಕಿ ಹಣವನ್ನು ವಸೂಲಿ ಮಾಡಲು ಭಾರತ ಹಾಗೂ ಯುಎಇ ದೇಶಗಳಲ್ಲಿ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ.

