ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ ಸೇತುವೆ ಬಳಿ ನಡೆದ ದುರ್ಘಟನೆಯೊಂದರಲ್ಲಿ, ಕಣಜಾರು ಗ್ರಾಮದ ಕಡೆಬರ್ಕೆ ನಿವಾಸಿ ಸುರೇಶ್ ಶೆಟ್ಟಿ (51) ಎಂಬುವವರ ಮೃತದೇಹ ಬುಧವಾರ ನದಿಯಲ್ಲಿ ಪತ್ತೆಯಾಗಿದೆ.
ನದಿಯ ದಡದಲ್ಲಿ ಮೃತದೇಹವು ಕವುಚಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದು, ಸೇತುವೆಯ ಮೇಲಿಂದ ಹಾರಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ಮೃತದೇಹವನ್ನು ಪರಿಶೀಲಿಸಿ ಗುರುತು ಪತ್ತೆಹಚ್ಚಿದ್ದಾರೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಸುರೇಶ್ ಶೆಟ್ಟಿ ಅವರು ಅಕ್ಟೋಬರ್ 9ರಂದು ಮಧ್ಯಾಹ್ನ 2 ಗಂಟೆಯಿಂದ ನಾಪತ್ತೆಯಾಗಿದ್ದರು. ಮನೆಯಿಂದ ಕಟೀಲಿಗೆ ತೆರಳಿದ್ದ ಅವರು, ಅಲ್ಲಿನ ಸಂಬಂಧಿಕರ ಅಂಗಡಿಯಲ್ಲಿ ತಮ್ಮ ಬ್ಯಾಗ್ ಇಟ್ಟು ಬಳಿಕ ಕಾಣೆಯಾಗಿದ್ದರು. ಈ ಕುರಿತು ಕುಟುಂಬಸ್ಥರು ಹಾಗೂ ಸ್ಥಳೀಯರು ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಇದೀಗ ಎಣ್ಣೆಹೊಳೆ ಸೇತುವೆ ಸಮೀಪ ಅವರ ಮೃತದೇಹ ಪತ್ತೆಯಾಗಿದೆ.
ಸಂಭವ ಸ್ಥಳಕ್ಕೆ ಕಾರ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಾವಿಗೆ ನಿಖರವಾದ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.

