ಬ್ರಹ್ಮಾವರ: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ರಸ್ತೆ ಬದಿಯಲ್ಲಿದ್ದ ಕಾರಿಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉಪ್ಪಿನಕೋಟೆಯಲ್ಲಿ ಸಂಭವಿಸಿದೆ. ಬುಧವಾರ ಬೆಳಗ್ಗಿನ ಜಾವ ಸುಮಾರು 5:30 ಗಂಟೆಗೆ ಈ ಅಪಘಾತ ನಡೆದಿದೆ.
ಅಜಯನ್ ಎಂಬುವವರು ಕಂಟೈನರ್ ಲಾರಿಯನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆಯ ಶೆಟ್ಟಿ ಮಲ್ಟಿ ಕಾರ್ ಸರ್ವಿಸ್ ಎದುರು ತಲುಪುತ್ತಿದ್ದಂತೆ, ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಏರಿ ಎದುರಿನ ರಸ್ತೆಯನ್ನು ದಾಟಿದೆ. ಬಳಿಕ ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಧಾವಿಸಿ, ಅಲ್ಲಿದ್ದ ಗ್ಯಾರೇಜ್ ಮುಂಭಾಗದಲ್ಲಿದ್ದ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಸ್ಥಳೀಯ ನಿವಾಸಿ ಸುಜನ್ ಕುಮಾರ್ ಅವರಿಗೆ ಸೇರಿದ ಶೆಟ್ಟಿ ಮಲ್ಟಿ ಕಾರ್ ಸರ್ವಿಸ್ಗೆ ಈ ಹಿಂದೆ ಅಪಘಾತಕ್ಕೊಳಗಾಗಿ ರಿಪೇರಿಗಾಗಿ ಬಂದಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿದೆ. ಈ ರಭಸಕ್ಕೆ ಕಾರಿನ ಮೇಲ್ಭಾಗ, ಎಡ ಹಾಗೂ ಬಲ ಭಾಗಗಳು ತೀವ್ರವಾಗಿ ಜಖಂಗೊಂಡಿವೆ. ಘಟನೆಯಲ್ಲಿ ಕಂಟೈನರ್ನಲ್ಲಿದ್ದ ದೇವೇಂದ್ರ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಸಂಬಂಧ ಸುಜನ್ ಕುಮಾರ್ ಅವರು ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 193/2026, ಕಲಂ: 281, 125 (a) BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

