ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವು ಇಂದು ವಿದ್ಯಾರ್ಥಿಗಳ ಕಲಿಕಾ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಪ್ರಪಂಚದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ದಿನನಿತ್ಯದ ಅಭ್ಯಾಸ ಹಾಗೂ ಹೋಮ್ವರ್ಕ್ಗಾಗಿ ಎಐ ಉಪಕರಣಗಳನ್ನು ವ್ಯಾಪಕವಾಗಿ ಬಳಸುತ್ತಿದ್ದು, ಭಾರತೀಯ ವಿದ್ಯಾರ್ಥಿಗಳು ಸಹ ಇದಕ್ಕೆ ಹೊರತಾಗಿಲ್ಲ. ಆದರೆ, ಶಿಕ್ಷಣದಲ್ಲಿ ಎಐ ಬಳಕೆಯು ನಿಜವಾಗಿಯೂ ಅನುಕೂಲಕರವೇ ಅಥವಾ ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆಯೇ ಎಂಬ ಚರ್ಚೆ ಜಾಗತಿಕ ಮಟ್ಟದಲ್ಲಿ ತೀವ್ರಗೊಂಡಿದೆ.
ಈ ನಡುವೆ, ವಿಶ್ವಬ್ಯಾಂಕ್ (World Bank) ಪ್ರಕಟಿಸಿರುವ ‘ವರ್ಲ್ಡ್ ಡೆವಲಪ್ಮೆಂಟ್ ರಿಪೋರ್ಟ್ 2026’ ಅತ್ಯಂತ ಆತಂಕಕಾರಿ ವಿಷಯವನ್ನು ಹೊರಹಾಕಿದೆ. ಚೀನಾದ 7 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ನಡುವೆ ನಡೆಸಲಾದ ಅಧ್ಯಯನದ ಪ್ರಕಾರ, 2022 ರಿಂದ 2025 ರ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಎಐ ಬಳಕೆ ಶೂನ್ಯದಿಂದ ಶೇಕಡಾ 80 ಕ್ಕೆ ಏರಿಕೆಯಾಗಿದೆ. ಎಐ ಬಳಕೆಯಿಂದ ವಿದ್ಯಾರ್ಥಿಗಳು ಹೋಮ್ವರ್ಕ್ ಸುಲಭವಾಗಿ ಮುಗಿಸಿ ಹೆಚ್ಚು ಅಂಕ ಪಡೆಯುತ್ತಿದ್ದಾರೆ. ಆದರೆ, ಅದೇ ವಿದ್ಯಾರ್ಥಿಗಳು ಶಾಲಾ-ಕಾಲೇಜು ಪರೀಕ್ಷೆಗಳಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ಈ ವರದಿ ಎಚ್ಚರಿಸಿದೆ.
ಅಧ್ಯಯನದ ವಿವರಗಳ ಪ್ರಕಾರ, ಹೋಮ್ವರ್ಕ್ ಮತ್ತು ಅಸೈನ್ಮೆಂಟ್ಗಳಿಗೆ ಎಐ ನೆರವು ಪಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಹೋಮ್ವರ್ಕ್ ಸ್ಕೋರ್ನಲ್ಲಿ ಶೇಕಡಾ 18 ರಷ್ಟು ಸುಧಾರಣೆ ಕಂಡುಬಂದಿದೆ. ಆದರೆ, ಸಂಪೂರ್ಣವಾಗಿ ಎಐ ತಂತ್ರಜ್ಞಾನದ ಮೇಲೆಯೇ ಅವಲಂಬಿತರಾಗುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಸ್ವಯಂ ಆಲೋಚನಾ ಶಕ್ತಿ ಮತ್ತು ಗ್ರಹಿಕಾ ಸಾಮರ್ಥ್ಯ ಕ್ಷೀಣಿಸುತ್ತಿದೆ. ಇದರ ಪರಿಣಾಮವಾಗಿ, ತರಗತಿಯಲ್ಲಿ ನಡೆಯುವ ಮಾಸಿಕ ಪರೀಕ್ಷೆಗಳಲ್ಲಿ (Monthly Exams) ವಿದ್ಯಾರ್ಥಿಗಳ ಅಂಕ ಶೇಕಡಾ 20 ರಷ್ಟು ಕುಸಿದಿದೆ.
ಅಷ್ಟೇ ಅಲ್ಲದೆ, ಕಾಲೇಜು ಪ್ರವೇಶ ಪರೀಕ್ಷೆಗಳಲ್ಲೂ (College Entrance Exams) ಎಐ ಬಳಸಿದ ವಿದ್ಯಾರ್ಥಿಗಳು ಶೇಕಡಾ 5 ರಿಂದ 7 ರಷ್ಟು ಕಡಿಮೆ ಅಂಕ ಗಳಿಸಿದ್ದಾರೆ.
ದೀರ್ಘಕಾಲದವರೆಗೆ ಕೇವಲ ಎಐ ಆಧರಿಸಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಲ್ಲಿ ಈ ನಕಾರಾತ್ಮಕ ಪರಿಣಾಮವು ಶೇಕಡಾ 20 ರಷ್ಟಕ್ಕೆ ತಲುಪಿದೆ ಎಂದು ವರದಿ ಸ್ಪಷ್ಟಪಡಿಸಿದೆ. ತಂತ್ರಜ್ಞಾನವನ್ನು ಕೇವಲ ಮಾರ್ಗದರ್ಶಿಯಾಗಿ ಬಳಸುವ ಬದಲು ಸಂಪೂರ್ಣವಾಗಿ ಅದರ ಮೇಲೆಯೇ ಆಶ್ರಿತರಾಗುವುದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಕಂಠಕವಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

