ಬೆಂಗಳೂರು: ರಾಜ್ಯದಲ್ಲಿ 2020-2025ರ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ವಿವಿಧ ಗ್ರಾಮ ಪಂಚಾಯಿತಿಗಳ ಆಡಳಿತಾವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಆಡಳಿತ ಪ್ರಕ್ರಿಯೆ ಸುಗಮವಾಗಿ ನಡೆಯಲು ಆಡಳಿತಾಧಿಕಾರಿಗಳ ಅಧಿಕಾರಾವಧಿಯನ್ನು ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 8(2)ರ ಅನ್ವಯ ಈ ಹಿಂದೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.
ಈಗಾಗಲೇ ನೇಮಕಗೊಂಡಿದ್ದ ಕೆಲವು ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳ 6 ತಿಂಗಳ ಅವಧಿಯು ಪೂರ್ಣಗೊಂಡಿದೆ. ಆದರೆ, ಗ್ರಾಮ ಪಂಚಾಯಿತಿಗಳಿಗೆ ಇನ್ನೂ ಚುನಾವಣೆ ನಡೆಯದೇ ಇರುವ ಕಾರಣ, ಪಂಚಾಯಿತಿಗಳ ಆಡಳಿತ ಪ್ರಕ್ರಿಯೆಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 321ರಲ್ಲಿ ಸರ್ಕಾರಕ್ಕಿರುವ ಅಧಿಕಾರವನ್ನು ಚಲಾಯಿಸಿ, ಪ್ರಕರಣ 8(2)ರ ಅನ್ವಯ ಆಡಳಿತಾಧಿಕಾರಿಗಳ ಅಧಿಕಾರಾವಧಿಯನ್ನು ಮುಂದಿನ 6 ತಿಂಗಳ ಕಾಲಾವಧಿಗೆ ಮುಂದುವರಿಸಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.

