ಪಡುಬಿದ್ರಿ:- ಅಪ್ರಾಪ್ತ ಬಾಲಕರಿಬ್ಬರು ರೈಲ್ವೇ ಹಳಿಯ ಕಬ್ಬಿಣ ಹೆಕ್ಕಿದರೆಂದು ಅವರ ಮೇಲೆ ಹಲ್ಲೆ ನಡೆಸಿ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿರುವ ಕೊಂಕಣ ರೈಲ್ವೇ ಗ್ಯಾಂಗ್ ಮ್ಯಾನ್ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಕೆಗೊಳಗಾದ ಒಬ್ಬ ಬಾಲಕನ ತಂದೆ ಹೆಜಮಾಡಿಯ ಅಬ್ದುಲ್ ಖಾದರ್ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಬಾಲಕರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದು ಬಾಲಕರ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಲಿಮಾರು ಗ್ರಾಮದ ಅವರಾಲು ಮಟ್ಟು ಎಂಬಲ್ಲಿರುವ ಅಜ್ಜನ ಮನೆಗೆ ಬಾಲಕನೋರ್ವ ತನ್ನ ಗೆಳೆಯನೊಂದಿಗೆ ಹೋಗಿದ್ದನು.
ಶನಿವಾರ ಮಧ್ಯಾಹ್ನದ ವೇಳೆ ಇವರಿಬ್ಬರು ಆಟವಾಡುತ್ತ ರೈಲ್ವೇ ಹಳಿಯ ಬಳಿ ದೊರೆತ ಕಬ್ಬಿಣದ ತುಂಡನ್ನು ಹೆಕ್ಕಿದ್ದರು. ಇದನ್ನು ಗಮನಿಸಿದ ಗ್ಯಾಂಗ್ ಮ್ಯಾನ್ ನೋಡಿ ಬಾಲಕರಿಬ್ಬರನ್ನು ಹಿಡಿದು ಕೋಲಿನಿಂದ ಹಲ್ಲೆ ನಡೆಸಿ ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

