ಶೇಂಗಾ ಬೀಜ ತಿನ್ನದವರು ಯಾರಿದ್ದಾರೆ ಹೇಳಿ..ಇದು ಎಲ್ಲರಿಗೂ ಇಷ್ಟವಾಗುತ್ತೆ. ಕೆಲವು ಕಡೆ ಇದನ್ನು ಶೇಂಗಾ ಅಂತ ಕರೆದರೆ ಇನ್ನೂ ಕೆಲವು ಕಡೆ ಸಾಮಾನ್ಯವಾಗಿ ಕಡಲೆಕಾಯಿ ಎಂದೂ ಕರೆಯುತ್ತಾರೆ. ಅದೇನೇ ಇರಲಿ..ಉತ್ತರ ಕರ್ನಾಟಕ ಭಾಗದ ಜನರಂತೂ ತಮ್ಮ ಅಡುಗೆ ಕ್ರಮದಲ್ಲಿ ಇದನ್ನು ಬಳಸದಿದ್ದರೆ ಅವರಿಗೆ ಅಡುಗೆ ರುಚಿಯೂ ಆಗಲ್ಲ, ಪೂರ್ತಿನೂ ಆಗಲ್ಲ. ಆರೋಗ್ಯವರ್ಧಕ ಆಹಾರದಲ್ಲಿ ಇದು ಕೂಡಾ ಒಂದು.
ಬೆಳಗ್ಗಿನ ಚಿತ್ರಾನ್ನ, ಪುಳಿಯೋಗರೆಯಿಂದ ಹಿಡಿದು ಸಂಜೆಯ ತಿಂಡಿಯಲ್ಲೂ ಇದು ಹೆಚ್ಚಾಗಿ ಬಳಸುತ್ತಾರೆ. ಬೆಂಗಳೂರಿನಲ್ಲಂತೂ ಕಡಲೆಕಾಯಿ ಪರಿಷೆ ಎಂದು ಇದರದ್ದು ಜಾತ್ರೆಯನ್ನೇ ಮಾಡುತ್ತಾರೆ. ಶೇಂಗಾ ಖರೀದಿಸಲು ಜನ ಮುಗಿಬೀಳುತ್ತಾರೆ. ಬರೀ ಕಡಲೆಕಾಯಿಯನ್ನು ಕೆಲವರು ಬೇಯಿಸಿ ತಿಂದರೆ ಇನ್ನೂ ಕೆಲವರು ಉಪ್ಪು ಬೆರೆಸಿ ತಿನ್ನುತ್ತಾರೆ. ಒಟ್ಟಿನಲ್ಲಿ ಹೇಗೆ ತಿಂದರೂ ಕೂಡಾ ಇದು ಆರೋಗ್ಯಕ್ಕಂತೂ ಅತ್ಯುತ್ತಮ ಆಹಾರ ವಸ್ತುವಂತೆ. ಏಕೆಂದರೆ ಹೇರಳವಾದ ಪ್ರೋಟೀನ್, ಜೀವಸತ್ವವನ್ನು ಇದೆ ಹೊಂದಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ.
ಇದನ್ನು ಸೇವಿಸುವುದರಿಂದ ಸ್ಟ್ರೋಕ್ ಅಪಾಯದ ಸಾಧ್ಯತೆ ಕಡಿಮೆ. ಕಡಲೆಕಾಯಿಯಲ್ಲಿ ಕಂಡುಬರುವ ರೆಸ್ವೆರಾಟ್ರೋಲ್ ಅಂಶವು ರಕ್ತನಾಳಗಳಲ್ಲಿನ ಕಾರ್ಯವಿಧಾನಗಳನ್ನು ಬದಲಾಯಿಸುವ ಮೂಲಕ ಮತ್ತು ವಾಸೋಡಿಲೇಟರ್ ಹಾರ್ಮೋನ್ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸುವ ಮುಖೇನ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಕಡಲೆಕಾಯಿಯು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಮತ್ತು ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಪ್ರತಿದಿನ ಒಂದು ಹಿಡಿ ಕಡಲೆಕಾಯಿಯನ್ನು ಸೇವಿಸುವುದರಿಂದ ಖಿನ್ನತೆ ಕೂಡಾ ದೂರಾಗುತ್ತದೆಯಂತೆ. ಇದರಲ್ಲಿರುವ ಟ್ರಿಪ್ಟೊಫಾನ್ ಸಿರೊಟೋನಿನ್ ಎಂಬ ಅಂಶವು ಹೆಚ್ಚಿದ್ದಾಗ ಖಿನ್ನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ. ಕಡಲೆಕಾಯಿಯು ಪಾಲಿಫಿನಾಲಿಕ್ ಆಂಟಿ ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದೆ. ಮುಖ್ಯವಾಗಿ ಪಿ-ಕೌಮರಿಕ್ ಆಮ್ಲ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಮುಖ್ಯವಾಗಿ ಶೇಂಗಾ ಕಾಯಿ ಯಂಗ್ ಆಗಿ ಕಾಣುವಂತೆ ಮಾಡಲು ಉತ್ತೇಜಿಸುತ್ತದೆ. ಎಷ್ಟೇ ವಯಸ್ಸಾಗಿದ್ದರೂ ಕೂಡಾ ಯಾರಿಗೆ ತಾನೇ ಯಂಗ್ ಆಗಿ ಕಾಣಲು ಇಷ್ಟವಿರುವುದಿಲ್ಲ ಹೇಳಿ. ಈ ರೀತಿ ಕಾಣಲು ನಮಗೆ ಕಡಲೆಕಾಯಿ ಪ್ರಯೋಜನಕ್ಕೆ ಬರುತ್ತಂತೆ…ಕಡಲೆಕಾಯಿಯಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಸಿ ಅಂಶವಿದೆ. ಇದು ಕಾಲಜನ್ ಉತ್ಪಾದನೆಗೆ ಅವಶ್ಯಕವಾಗಿದೆ. ಕಾಲಜನ್ ಚರ್ಮದ ದೃಢತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ಚರ್ಮದ ಸುಕ್ಕುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕೂಡಾ ನಿಯಂತ್ರಿಸುತ್ತದೆ. ಹೀಗೆ ಶೇಂಗಾ ತಿನ್ನುವುದರಿಂದ ಅನೇಕ ಬಗೆಯ ಪ್ರಯೋಜನಗಳನ್ನು ಕಾಣಬಹುದು.


