ನ್ಯಾಷನಲ್ ಕ್ರಶ್, ಬಹುಭಾಷಾ ತಾರೆ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಇವರು ನಟಿಸಿದ ಚಿತ್ರಗಳು ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ. ಇತರ ನಟಿಯರೂ ಮತ್ಸರ ಪಡುವಂತೆ ರಶ್ಮಿಕಾ ಅವರು ಬೆಳೆಯುತ್ತಿದ್ದಾರೆ. ಇದೀಗ ಈ ನಡುವೆ ನಟಿಗೆ ಕಾಂಗ್ರೆಸ್ ಶಾಸಕ ರವಿ ಗಾಣಿಗ ಬೆದರಿಕೆ ಹಾಕಿದ್ದು ಇವರ ವಿರುದ್ಧ ದೂರು ನೀಡಲಾಗಿದೆ.
ರವಿ ಗಣಿಗ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ಸದಸ್ಯರು ಸಿಡಿದೆದ್ದಿದ್ದಾರೆ. ನಟಿಗೆ ಬೆದರಿಕೆ ಹಾಕಿದ ಶಾಸಕ ರವಿ ಗಣಿಗ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಎಂದು ಮಹಿಳಾ ಆಯೋಗಕ್ಕೆ ಸಿಎನ್ಸಿ ದೂರು ನೀಡಿದೆ.
ರವಿ ಗಣಿಗ ಅವರು `ಕಳೆದ ವರ್ಷ ಸಿನಿಮೋತ್ಸವ ಉದ್ಘಾಟನೆಗೆ ರಶ್ಮಿಕಾಗೆ ಆಹ್ವಾನ ನೀಡಲಾಗಿತ್ತಂತೆ. ನಮ್ಮ ಜನರು ಹತ್ತು ಬಾರಿ ಅವರ ಮನೆಗೆ ಅಲೆದಾಡಿದ್ರು. ಆದ್ರೆ ಅವರು ಬರಲಿಲ್ಲ. ಕನ್ನಡ ಸಿನಿಮಾದಿಂದ ಹೋಗಿ ಫೇಮಸ್ ಆಗಿ ಈಗ ನಾನು ಹೈದರಾಬಾದ್ ನವಳು ಎಂದು ಧಿಮಾಕು ತೋರಿಸುತ್ತಾರೆ’ ಎಂದು ಕಿಡಿಕಾರಿದ್ದಾರೆ.
ತನ್ನ ಸ್ವಂತ ಪರಿಶ್ರಮ, ಮತ್ತು ಪ್ರತಿಭೆಯ ಮೂಲಕ ಜನರ ಅಭಿಮಾನವನ್ನು ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡುವಂತೆ ಕೊಡವ ಸಮುದಾಯ ಆಗ್ರಹಿಸಿದೆ. ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಕೊಡವ ಸಂಘಟನೆಯಿಂದ ಪತ್ರ ಬರೆಯಲಾಗಿದೆ.


