ನಮ್ಮ ಸಂಪ್ರದಾಯಗಳ, ಪರಂಪರೆಯ ಬೇರಾಗಿರುವ ನಮ್ಮ ಹಿರಿಯರನ್ನು ಗೌರವಿಸುವುದು, ಸ್ವಸ್ಥ ಬದುಕನ್ನು ನಿರ್ಮಿಸಿ ಕೊಡುವುದು ನಮ್ಮ ಜವಾಬ್ದಾರಿ. ಹಾಗಾದರೆ ಅವರನ್ನು ಮನೆಯಲ್ಲಿ ನಾವು ಹೇಗೆ ನೋಡಿಕೊಳ್ಳಬಹುದು ಎಂಬ ಬಗ್ಗೆ ಇಲ್ಲಿದೆ ನೋಡಿ ಸರಳ ಮಾರ್ಗೋಪಾಯ.
ಇತ್ತೀಚಿನ ದಿನಗಳಲ್ಲಿ ಮನೆಯ ಹಿರಿಯರನ್ನು ನೋಡಿಕೊಳ್ಳೋದು, ಅವರಿಗಾಗಿ ಆರೈಕೆ ಮಾಡಲು ಸಮಯ ಇಲ್ಲದಿರುವುದರಿಂದ ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಆದರೆ ಸಾಧ್ಯವಾದಷ್ಟು ತಮ್ಮೆಲ್ಲಾ ಜ್ಞಾನ, ಪ್ರೀತಿ, ಆಚಾರ-ವಿಚಾರಗಳನ್ನು ನಮಗೇ ಧಾರೆಯೆರೆದಿರುವ ಅವರನ್ನು ವೃದ್ಧಾಪ್ಯದಲ್ಲಿ ಕಡೆಗಣಿಸೋದು ತಪ್ಪು.
ನಮ್ಮ ಅಮೂಲ್ಯವಾದ ಸಮಯವನ್ನು ಅವರ ಜೊತೆ ಕಳೆಯುವುದು ಒಳ್ಳೆಯದು. ಅವರ ಬದುಕಿನ ಬಗ್ಗೆಯೋ ಅಥವಾ ಅವರು ಹೇಳುವ ಅವರದ್ದೇ ಆದ ಕಥೆಗಳಿಗೆ ಕಿವಿಯಾದರೆ ಅವರೂ ಮುಕ್ತವಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತೊಂದು ವಿಚಾರವೆಂದರೆ ಅವರಿಗೆ ಸಾಯುವ ಹಂತದಲ್ಲಿ ಪ್ರಯೋಜನವಾಗುವ ರೀತಿಯಲ್ಲಿ ಜೀವವಿಮೆಯನ್ನು ಮಾಡಿಡಬೇಕು. ಇನ್ಶೂರೆನ್ಸ್ ಅನಾರೋಗ್ಯದ ಸಂದರ್ಭ ಹೆಚ್ಚು ಪೂರಕವಾಗುತ್ತದೆ.
ಸಣ್ಣಪುಟ್ಟ ಕೆಲಸ ಮಾಡುವುದರಿಂದಲೋ ಅಥವಾ ಪುಸ್ತಕ ಓದುವುದು, ಗಿಡಗಳಿಗೆ ನೀರು ಬಿಡುವುದು, ವಾಕಿಂಗ್, ಸಂಗೀತ ಕೇಳುವುದು ಈ ರೀತಿ ಅವರನ್ನು ಯಾವಾಗಲೂ ಕ್ರಿಯಾಶೀಲರನ್ನಾಗಿ ಇರುವಂತೆ ಮಾಡಿದರೆ ಅವರ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಅವರಿಗೆ ಸುರಕ್ಷತೆಯ ವಾತಾವರಣವನ್ನು ಕಲ್ಪಿಸಿ ಕೊಡಬೇಕು. ಯಾವಾಗಲೂ ಪ್ರೀತಿ ಮತ್ತು ಗೌರವವನ್ನು ಅವರ ಮೇಲೆ ವ್ಯಕ್ತಪಡಿಸುವುದರಿಂದ ಅವರು ಸುಖಿ ಜೀವಿಗಳಾಗಿ ಜೀವನ ನಡೆಸುತ್ತಾರೆ. ಹಿರಿಯರ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕಾಯ್ದುಕೊಳ್ಳುವುದು ಕೂಡಾ ನಮ್ಮ ಜವಾಬ್ದಾರಿಯಾಗಿರುತ್ತದೆ.

