ಸಾಸ್ತಾನ: ಇಂದು ಸಾಸ್ತಾನದಲ್ಲಿ ಜಗವ ಪೊರೆವ ಶ್ರೀನಿವಾಸ ದೇವರಿಗೆ ಪದ್ಮಾವತಿ ತಾಯಿಯೊಂದಿಗೆ ಕಲ್ಯಾಣೋತ್ಸವ ನೆರವೇರಲಿದ್ದು ಮೂವತ್ತು ಸಾವಿರಕ್ಕೂ ಅಧಿಕ ಭಕ್ತಾದಿಗಳು ಈ ಐತಿಹಾಸಿಕ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಇಂದು ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿದ್ದು ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಜರಗಲಿದೆ. ಮಧ್ಯಾಹ್ನ ಮಹಾಮಂಗಳಾರತಿ, ಅನ್ನಸಂತರ್ಪಣೆ ಕೂಡಾ ಇರಲಿದ್ದು ನಂತರ ಕುಣಿತ ಭಜನೆ, ನಂತರ ಪದ್ಮಾವತಿ ದೇವರ ಸಹಿತ ಶ್ರೀನಿವಾಸ ದೇವರ ಶೋಭಾಯಾತ್ರೆ ಅದ್ಧೂರಿಯಾಗಿ ಜರಗಲಿದೆ.
ನಂತರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದ್ದು ಭಕ್ತಾದಿಗಳು ಕಣ್ತುಂಬಿಕೊಳ್ಳಲಿದ್ದಾರೆ. ನಂತರ ಅನ್ನಸಂತರ್ಪಣೆ ವ್ಯವಸ್ಥೆಯೂ ಇರಲಿದೆ.

