ಹುಬ್ಬಳ್ಳಿ: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಪುಟ್ಟ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಹಿಸುಕಿ ಕೊಲೆ ಮಾಡಿದ ಕಟುಕನೋರ್ವ ಪೊಲೀಸರ ಗುಂಡೇಟಿಗೆ ಬಲಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬಿಹಾರ ಮೂಲದ ರಿತೇಶ್ ಕುಮಾರ್ ಪೊಲೀಸರ ಗುಂಡೇಟಿಗೆ ಬಲಿಯಾದ ವ್ಯಕ್ತಿ. ಭಾನುವಾರ ಬೆಳಿಗ್ಗೆ ವಿಜಯನಗರದಲ್ಲಿ ಐದು ವರ್ಷದ ಮಗು ನಾಪತ್ತೆಯಾದ ಬಗ್ಗೆ ದೂರು ದಾಖಲಿಸಲಾಗಿತ್ತು. ನಂತರ ಮಗು ನಾಪತ್ತೆಯಾದ ಸ್ಥಳದ ಎದುರು ಇರುವ ಶೆಡ್ ನಲ್ಲಿ ಮೃತದೇಹ ಪತ್ತೆಯಾಗಿತ್ತು.
ಪೊಲೀಸರು ತನಿಖೆ ಮಾಡಿದಾಗ ಬಿಹಾರದ ಪಾಟ್ನಾದ ನಿವಾಸಿ ರಿತೀಶ್ ಕುಮಾರ್ ಆರೋಪಿ ಎಂದು ತಿಳಿದುಬಂದಿದೆ. ಬಾಲಕಿಗೆ ತಿಂಡಿ ಕೊಡುವುದಾಗಿ ಪುಸಲಾಯಿಸಿ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ. ಬಾಲಕಿ ಅತ್ತಾಗ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ, ರಿತೇಶ್ ನನ್ನು ಬಂಧಿಸಲು ತೆರಳಿದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲ್ಲೆಗೆ ಮುಂದಾಗಿದ್ದನು. ಈ ವೇಳೆ ಮಹಿಳಾ ಪಿಎಸ್ಐ ಅನ್ನಪೂರ್ಣ ಸಹಿತ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಆರೋಪಿ ಕೂಡಾ ಅಸುನೀಗಿದ್ದಾನೆ. ಇದೀಗ ಮೃತ ಬಾಲಕಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಹತ್ತು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

