ಸಾಮಾನ್ಯವಾಗಿ ಅನೇಕರು ಕ್ಯಾಲೆಂಡರ್ ವರ್ಷದ ಮೊದಲ ತಿಂಗಳು ಜನವರಿಯನ್ನು ಹೊಸ ವರ್ಷವನ್ನಾಗಿ ಆಚರಿಸುತ್ತಾರೆ. ಆದರೆ ಕರಾವಳಿಯಲ್ಲಿ ಮತ್ತು ಕೇರಳ ಭಾಗದಲ್ಲಿ ವಿಷು ಹಬ್ಬವನ್ನು ಹೊಸ ವರ್ಷದ ಸಂಭ್ರಮವನ್ನಾಗಿ ಆಚರಿಸಲಾಗುತ್ತದೆ. ಇಂದು ಕರಾವಳಿಯಾದ್ಯಂತ ವಿಷು ಹಬ್ಬದ ಸಂಭ್ರಮ, ವೈವಿಧ್ಯ ಬಗೆಯ ಭೋಜನದ ರಸದೌತಣ…!
ತುಳುವರು ಇದನ್ನು `ಬಿಸು ಪರ್ಬ’ ಎಂದು ಕರೆದರೆ ಇನ್ನೂ ಕೆಲವು ಕಡೆ ವಿಷು ಹಬ್ಬ ಎನ್ನಲಾಗುತ್ತದೆ. ಸೌರಮಾನ ಯುಗಾದಿಯನ್ನೇ ಬಿಸು ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ ಶ್ರೀಕೃಷ್ಣನು ಈ ದಿನದಂದು ನರಕಾಸುರನೆಂಬ ರಾಕ್ಷಸನನ್ನು ಕೊಂದ ಕಾರಣ ಆ ವಿಜಯದ ಭಾಗವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನಲಾಗಿದೆ.
ಇನ್ನು ಈ ಬಿಸು/ ವಿಷು ಹಬ್ಬದಲ್ಲಿ ಮಂಗಳಕರ ವಸ್ತುಗಳನ್ನಿಟ್ಟು ಪೂಜಿಸುತ್ತಾರೆ. ಅಕ್ಕಿ, ಮಾವು, ಸೌತೆಕಾಯಿ, ಬಟ್ಟೆ, ಹಣ, ವೀಳ್ಯದೆಲೆ, ಅಡಕೆ, ಕನ್ನಡಿ ಕೇಂದ್ರಬಿಂದುವಾಗಿರುತ್ತದೆ. ಇನ್ನು ಭೋಜನ ಕೂಡಾ ವಿಶೇಷವಾಗಿರುತ್ತದೆ. ವಸಂತ ಋತುವಿನಲ್ಲಿ ಬೆಳೆಯುವ ಹೊಸ ಆಹಾರ ಪದಾರ್ಥಗಳಿಂದ ಅಡುಗೆಯನ್ನು ಸಿದ್ಧಪಡಿಸಿ ಕುಟುಂಬ ಸಮೇತ ಸವಿಯಲಾಗುತ್ತದೆ. ಹೀಗೆ ಅತ್ಯಂತ ಅರ್ಥಪೂರ್ಣವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

