ಮಂಗಳೂರು ಮಹಿಳೆಯೊಬ್ಬರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ಶುಂಠಿಲಪದವು ನಿವಾಸಿ ಶೇಖರ ಶೆಟ್ಟಿ ಎಂಬಾತನನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆ ಗೊಳಿಸಿದೆ.
ನಿಡ್ಡೋಡಿ ಯಮುಲ ಮನೆ ನಿವಾಸಿ ರೇವತಿ ಎಂಬಾಕೆಯನ್ನು ಪಡ್ಲಗುರಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದನು.
2016 ಜ. 12 ರಂದು ರೇವತಿ ನಾಪತ್ತೆಯಾಗಿರುವುದಾಗಿ ಆಕೆಯ ಅಣ್ಣ ತಿಮ್ಮಪ್ಪ ಮಡಿವಾಳ ಮೂಡುಬಿದಿರೆ ಠಾಣಿಗೆ ದೂರು ನೀಡಿದ್ದರು. ಶೇಖರ ಶೆಟ್ಟಿ ಮೇಲೆ ಸಂಶಯವಿರುವುದಾಗಿ ತಿಳಿಸಿದ್ದರು. ಪೋಲಿಸರು ಶೇಖರ ಶೆಟ್ಟಿಯನ್ನು ಬಂಧಿಸಿ ವಿಚಾರಿಸಿದಾಗ ಆತ, ರೇವತಿಯಿಂದ ಚಿನ್ನದ ಸರ ಪಡೆದು ಅಡವಿಟ್ಟಿದ್ದು, ಅದನ್ನು ಬಿಡಿಸಿಕೊಡುವಂತೆ ಒತ್ತಡ ಹೇರುತ್ತಿದ್ದಳು. ಆದ್ದರಿಂದ 2016ರ ಜ.12ರಂದು ಪಡ್ಲಗುರಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಪೊಲೀಸರನ್ನು ಕರೆದುಕೊಂಡು ಹೋಗಿ ಶವವನ್ನು ತೋರಿಸಿದ್ದನು.
ಪ್ರಕರಣದಲ್ಲಿ ಆರೋಪಿ ಪರ ವಕೀಲರು ವಾದ ಮಂಡಿಸಿದ್ದು, ಡಿಎನ್ಎ ವರದಿಯಲ್ಲಿ ತನಿಖಾಧಿಕಾರಿಯವರು ಕಳುಹಿಸಿಕೊಟ್ಟಿದ್ದ ರೇವತಿಯ ಶವದ ಜೈವಿಕ ಅಂಶಗಳು ಪರೀಕ್ಷೆಗೆ ಸಮರ್ಪಕವಾಗಿರಲಿಲ್ಲ ವರದಿ ನೀಡಿದ್ದವು. ಈ ಕಾರಣದಿಂದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದನ್ನು ಮನಗಂಡು ಅರೋಪಿಯನ್ನು ಖುಲಾಸೆಗೊಳಿಸಿದ್ದಾರೆ.

