ಕಾರ್ಕಳ: ಕರಾವಳಿಯಲ್ಲಿ ಮೊನ್ನೆ ತಾನೇ ನಡೆದಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಅನೇಕ ತಿರುವುಗಳು ಸಿಕ್ಕಿದ್ದು ಸಂಶಯಾಸ್ಪದ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೂ ಈ ಪ್ರಕರಣದಲ್ಲಿ ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶಾಮೀಲಾಗಿದ್ದಾರೆ ಎಂಬ ಆರೋಪ ಹಿಂದೂ ಸಂಘಟನೆಗಳಿಂದ ಕೇಳಿ ಬರುತ್ತಿದ್ದು ಹತ್ಯೆ ನಡೆದ ಸಂದರ್ಭ ಹಂತಕರು ಬಚಾವಾಗಲು ದಾರಿ ಮಧ್ಯೆ ಅವಕಾಶ ಮಾಡಿಕೊಟ್ಟ ಮುಸ್ಲಿಂ ಮಹಿಳೆಯ ಬಂಧನವೂ ಇನ್ನೂ ಆಗಿಲ್ಲ…ಈ ಹಿನ್ನೆಲೆ ತನಿಖೆ ದಾರಿ ತಪ್ಪದೆ ಶೀಘ್ರವಾಗಿ ಹತ್ಯೆಗೈದ ಕೊಲೆಗಡುಕರಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಈ ಪ್ರಕರಣವನ್ನು ಎನ್ಐಎಗೆ ಒಪ್ಪಿಸಬೇಕೆಂದು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಈಗಾಗಲೇ ತನಿಖೆಯಲ್ಲಿ ಬಹಿರಂಗಗೊಂಡ ಮಾಹಿತಿಯಂತೆ ಸುಹಾಸ್ ಶೆಟ್ಟಿ ಹತ್ಯೆಗೆ ಅಂತರ್ ರಾಜ್ಯ ಮತ್ತು ವಿದೇಶದಿಂದ ಫಂಡಿಂಗ್ ನಡೆದಿರುವ ಮಾಹಿತಿ ಲಭಿಸಿದ್ದು ಈ ಹತ್ಯೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೂರಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ ಎಂಬ ಗುಮಾನಿ ಇದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಮುಂಬರುವ ಮೇ. ಒಂಭತ್ತರಂದು ಈ ಹತ್ಯಾ ಪ್ರಕರಣವನ್ನು ಎನ್ಐಎಗೆ ಒಪ್ಪಿಸಲು ನಾವು ರಾಜ್ಯಪಾಲರನ್ನು ಭೇಟಿಯಾಗಲಿದ್ದೇವೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು. ರಾಜ್ಯ ಸರ್ಕಾರ, ಕಾನೂನು ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

