ನವದೆಹಲಿ: ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಅಮಾಯಕ ಭಾರತೀಯ ಪ್ರವಾಸಿಗರ ಮೇಲೆ ನಡೆದಿದ್ದ ಹತ್ಯೆಯನ್ನು ಖಂಡಿಸಿ ಪಾಕಿಸ್ತಾನವನ್ನು ಹತ್ತಿಕ್ಕಲು ಹಲವು ದಿನಗಳಿಂದ ಭಾರತ ಮಾಸ್ಟರ್ ಪ್ಲ್ಯಾನ್ ರೂಪಿಸಿತ್ತು. ಅದರಂತೆ ನಿನ್ನೆ ನಸುಕಿನ ಜಾವ ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಮಹತ್ವದ ಕಾರ್ಯಾಚರಣೆಯನ್ನು ನಡೆಸಿದೆ. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿ, ಕರ್ನಲ್ ಸೋಫಿಯಾ ಖುರೇಶಿ, ವಿಂಗ್ ಕಮ್ಯಾಂಡರ್ ವ್ಯೋಮಿಕಾ ಸಿಂಗ್ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಉಗ್ರರ ಸೌಕರ್ಯವನ್ನು ನಾಶಪಡಿಸಿ ಭಾರತಕ್ಕೆ ಉಗ್ರರನ್ನು ರವಾನಿಸದಂತೆ ತಡೆಯುವ ಮುಖ್ಯ ಉದ್ದೇಶ ಈ ಕಾರ್ಯಾಚರಣೆದ್ದಾಗಿತ್ತು. ಅಲ್ಲದೆ ಉಗ್ರರನ್ನು ಬೆಂಬಲಿಸುವವರಿಗೆ ಕೂಡಾ ಇದು ತಕ್ಕ ಪಾಠವಾಗಬೇಕು ಅನ್ನೋದಕ್ಕೆ ಈ ಕಾರ್ಯಾಚರಣೆ ನಡೆಯಿತು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಸಿಂಧೂರ ಕಾರ್ಯಾಚರಣೆಯ ಪಿನ್ ಟು ಪಿನ್ ಮಾಹಿತಿಯನ್ನು ನೀಡಿದ ಇಬ್ಬರು ಮಹಿಳಾ ಅಧಿಕಾರಿಗಳು ಸೇನೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಕಾರ್ಯಾಚರಣೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಮಾತನಾಡಿ ಪಾಕಿಸ್ತಾನದ ಪ್ರಜೆಗಳಿಗೆ ಯಾವುದೇ ತೊಂದರೆ ಆಗದಂತೆ ಒಂಭತ್ತು ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಇಪ್ಪತ್ತೊಂದು ಉಗ್ರರ ತರಬೇತಿ ಕೇಂದ್ರವನ್ನು ಗುರುತು ಮಾಡಿದ್ದು ಸಿಕ್ಕ ಖಚಿತ ಮಾಹಿತಿಯ ಮೇರೆಗೆ ನಿರ್ಧರಿಸಿ ಉಗ್ರರ ಅಡಗು ತಾಣಗಳ ಮೇಲೆ ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಪಾಕಿಸ್ತಾನ ಸೇನೆಯ ಯಾವುದೇ ಪ್ರದೇಶದ ಮೇಲೆ ದಾಳಿ ನಡೆಸಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ವಿಕ್ರಂ ಮಿಶ್ರಿ ಮಾತನಾಡಿ ಒಂದು ದಶಕದ ಅವಧಿಯಲ್ಲಿ ಭಾರತ ಗಡಿಯ ಪ್ರದೇಶಗಳಲ್ಲಿ ಉಗ್ರರು ನಡೆಸಿದ ದಾಳಿಗೆ ಸುಮಾರು ೩೫೦ ಭಾರತೀಯರು ಸಾವನ್ನಪ್ಪಿದ್ದಾರೆ. ಆದರೆ ಇನ್ಮುಂದೆ ಇದು ನಡೆಯೋದಿಲ್ಲ. ಉಗ್ರರಿಗೆ ಸ್ವರ್ಗದಂತಿರುವ ಪಾಕಿಸ್ತಾನವನ್ನು ಹೀಗೇ ಸುಮ್ಮನೆ ಬಿಡೋದಿಲ್ಲ. ಉಗ್ರರ ದಾಳಿಗೆ ಸಹಾಯ ಮಾಡಿದವರನ್ನೂ ಬಿಡೋದಿಲ್ಲ. ನಮ್ಮ ಕಾರ್ಯಾಚರಣೆಯ ಮೂಲಕ ಸಾವನ್ನಪ್ಪಿದವರಿಗೆ ನ್ಯಾಯ ನೀಡಲಾಗಿದೆ. ಭಾರತೀಯರ ರಕ್ಷಣೆಯಲ್ಲಿ ನಮ್ಮ ಸೇನೆ ಯಾವಾಗಲೂ ಸರಿಯಾದ ಜವಾಬ್ದಾರಿ ನಿರ್ವಹಿಸುತ್ತದೆ ಎಂದು ಹೇಳಿದರು.
ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಶಿ ಮೂಲತಃ ಗುಜರಾತ್ ನವರು. ಇವರ ಅಜ್ಜ ಕೂಡಾ ಭಾರತೀಯ ಸೇನೆಯಲ್ಲಿದ್ದರು. ಇವರ ತಙದೆ ಕೂಡಾ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮದುವೆಯಾಗಿ ಒಂದು ಮಗು ಇದ್ದರೂ ಕೂಡಾ ಇವರ ಕರ್ತವ್ಯ ಶ್ರದ್ಧೆ, ದೇಶಪ್ರೇಮವನ್ನು ಕೊಂಡಾಲೇಬೇಕು. ಈ ಮೂರೂ ಅಧಿಕಾರಿಗಳೂ ಕೂಡಾ ಉತ್ತಮ ಹಿನ್ನೆಲೆಯುಳ್ಳವರು. ವಿಕ್ರಂ ಮಿಶ್ರಿ ಅವರು ಮೂಲತಃ ಕಾಶ್ಮೀರಿ ಪಂಡಿತರಾಗಿದ್ದು ಚೀನಾಕ್ಕೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ವ್ಯೋಮಿಕಾ ಸಿಂಗ್ ಅವರು ವಾಯುಪಡೆಯ ವಿಂಗ್ ಕಮಾಂಡರ್. ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್ ಗಳನ್ನು ಹಾರಿಸಿದ್ದಾರೆ. ಈ ಮೂರೂ ಅಧಿಕಾರಿಗಳು ವಿಭಿನ್ನ ಧರ್ಮದವರಾಗಿದ್ದರೂ, ಅನೇಕ ವಿಶೇಷ ರೀತಿಯ ಹಿನ್ನೆಲೆಯನ್ನು ಹೊಂದಿದ್ದರೂ ಕೂಡಾ ದೇಶದ ಮೇಲಿರುವ ಗೌರವ, ಭಕ್ತಿಗೆ ನಾವು ಸೆಲ್ಯೂಟ್ ಹೊಡೆಯಲೇಬೇಕು.

