ನವೋದಯ ಗ್ರಾಮ ವಿಕಾಸ ಟ್ರಸ್ಟ್ ಪ್ರವರ್ತಿತ ನವೋದಯ ಸ್ವಸಹಾಯ ಗುಂಪುಗಳ ಸ್ಥಾಪನೆಯಾಗಿ 25 ಸಂವತ್ಸರಗಳು ತುಂಬಿದ ಸುಸಂದರ್ಭದಲ್ಲಿ “ನವೋದಯ ರಜತ ಸಂಭ್ರಮ” ಸಮಾವೇಶ ನಾಳೆ ಬೆಳಿಗ್ಗೆ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿದೆ.
ನಮ್ಮಿಂದ ನಮಗಾಗಿ, ನಮಗೋಸ್ಕರ ಸ್ವಸಹಾಯ ಸಂಘಗಳು ಎಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಆರ್ಥಿಕ ಸಬಲೀಕರಣದತ್ತ ಹೆಜ್ಜೆ ಹಾಕಲು ಸಾಮಾನ್ಯ ವರ್ಗದ ಜನರನ್ನು ಪ್ರೇರೇಪಿಸುವುದೇ ನವೋದಯ ಸಂಘಗಳ ಪ್ರಮುಖ ಉದ್ದೇಶ. ಈ ಸಂಘದ ಇಪ್ಪತ್ತೈದನೇ ವರ್ಷದ ರಜತ ಸಂಭ್ರಮ ಅದ್ಧೂರಿಯಾಗಿ ನಡೆಯಲಿದೆ. ಕಾರ್ಯದಲ್ಲಿ ಸುಮಾರು ಒಂದೂವರೆ ಲಕ್ಷ ಮಹಿಳೆಯರು ಸಮವಸ್ತ್ರದಲ್ಲಿ ಭಾಗವಹಿಸಿದ್ದು , ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಕಾರ್ಯಕ್ರಮಕ್ಕೆ ರಾಜ್ಯದ ಸಿಎಂ ಸಿದ್ಧರಾಮಯ್ಯ ಅವರು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ನವೋದಯ ಸ್ವಸಹಾಯ ಗುಂಪುಗಳ ಸದಸ್ಯರುಗಳಿಗೆ ಮಹಾರಾಷ್ಟ್ರ ಸಿಎಂ ಶ್ರೀ ದೇವೇಂದ್ರ ಫಡ್ನವಿಸ್ ಅವರು ಸವಲತ್ತು ವಿತರಣೆ ಮಾಡಲಿದ್ದಾರೆ. ನವೋದಯ ಗ್ರಾಮ ವಿಕಾಸ ಟ್ರಸ್ಟ್ ನ ಅಭಿವೃದ್ಧಿಶೀಲ ಕಾರ್ಯ ಚಟುವಟಿಕೆಗಳನ್ನು, ಸಂಪೂರ್ಣ ಮಾಹಿತಿಯನ್ನು ಬಿಚ್ಚಿಡುವ ಸಂತೃಪ್ತಿ ಸ್ಮರಣ ಸಂಚಿಕೆಯನ್ನು ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯಸಭಾ ಸ್ಪೀಕರ್ ಯುಟಿ ಖಾದರ್ ಅವರು ಸಹಕಾರಿ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಅತ್ಯುತ್ತಮ ನವೋದಯ ಗುಂಪುಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ರತ್ನ ಡಾ.ಎಂ ರಾಜೇಂದ್ರ ಕುಮಾರ್ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುವಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ, ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಶಾಸಕರು, ಸಂಸದರು ಆಗಮಿಸಲಿದ್ದು ರಾಜ್ಯದ ಅನೇಕ ರಾಜ್ಯಕಾರಣಿಗಳು ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಲಿದ್ದಾರೆ.




