ಜಗತ್ತಿನಲ್ಲಿ ತಾಯೆಂದರೆ ಹಾಗೆ..ನಿಸ್ವಾರ್ಥ ಜೀವ. ತನಗೇನನ್ನೂ ಬಯಸದೆ ಸರ್ವಸ್ವವನ್ನೂ ಮಕ್ಕಳ ಪಾಲಿಗೆ ಇಡುವ ತ್ಯಾಗಮಯಿ…ದೇವರ ಪ್ರತಿರೂಪವಾದ ತಾಯಿಗೆ ಧನ್ಯವಾದ ಹೇಳಲೊಂದು ದಿನ…ಅದೇ ಈ ಸುದಿನ…ವಿಶ್ವ ತಾಯಂದಿರ ದಿನ.
ಕಣ್ಣಿಗೆ ಕಾಣುವ ದೇವರಾದ ತಾಯಿಗೆ ವಿಶೇಷವಾದ ಪ್ರಾಶಸ್ತ್ಯವಿದೆ. ಮಾತೃ ದೇವೋಭವ ಎಂಬ ಉಕ್ತಿ ಸುಮ್ಮನೆ ಹುಟ್ಟಿಲ್ಲ. ಪ್ರತೀ ವರ್ಷ ಮೇ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ತಾಯಂದಿರ ದಿನದ ಆಚರಣೆಯ ಪರಿಕಲ್ಪನೆ ಹುಟ್ಟಿದ್ದು ಅಮೇರಿಕಾದಲ್ಲಿ. ಅನ್ನಾ ಜಾರ್ವಿಸ್ ಎಂಬವರು ಇದನ್ನು ಆಚರಿಸಿದರು. ಅವರ ತಾಯಿಯ ಸ್ಮರಣಾರ್ಥ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿ ತಾಯಂದಿರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರು. ಅಂದಿನಿಂದ ಯುರೋಪ್, ಭಾರತ ಸೇರಿದಂತೆ ಅನೇಕ ಕಡೆ ತಾಯಂದಿರ ದಿನವನ್ನು ಆಚರಿಸಲಾಯಿತು.
ತಾಯಿ ಮಕ್ಕಳ ಸಂಬಂಧವನ್ನು ಬಲಪಡಿಸಲು ಒಂದು ಅವಕಾಶವನ್ನು ಪಡೆದುಕೊಳ್ಳುವ ಸಲುವಾಗು ಈ ಆಚರಣೆ ಸೃಷ್ಟಿಯಾಯಿತು. ತಾಯಂದಿರಿಗೆ ಮನೆಗೆಲಸದಿಂದ ವಿರಾಮ ನೀಡಿ ಅವರನ್ನು ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಿ, ಅವರ ಜೊತೆ ಸಮಯ ಕಳೆದು, ಒಂದೊಳ್ಳೆ ಗಿಫ್ಟ್ ಕೊಟ್ಟರೆ ಅವರಿಗಾಗುವ ಸಂತೋಷಕ್ಕೆ ಪಾರವೇ ಇರಲ್ಲ.
ದೇವರ ಪ್ರತಿರೂಪವಾದ ತಾಯಿಗೆ ಇಂದು ಶುಭಾಶಯ ಕೋರಿ ಬಿಗಿದಪ್ಪಿಕೊಂಡರೆ ಸಾಕು…ಅವಳಷ್ಟು ಸಂಭ್ರಮಿಸುವ ವ್ಯಕ್ತಿ ಬೇರೊಬ್ಬರಿಲ್ಲ.ಅಮ್ಮಾ ಅಂದ್ರೆನೇ ಪ್ರತೀ ದಿನದ ಆಚರಣೆ, ಪ್ರತೀ ದಿನದ ಸಂಭ್ರಮ. ಅವಳ ತ್ಯಾಗ, ಕಷ್ಟ, ನಿಸ್ವಾರ್ಥ ಪ್ರೀತಿಗೆ ಈ ಒಂದು ದಿನ ಅತ್ಯಲ್ಪವೆನಿಸುತ್ತದೆ ಅಲ್ಲವೇ….?

