ಅನಾರೋಗ್ಯದ ಕಾರಣದಿಂದಾಗಿ ಕ್ಲಿನಿಕ್ ಗೆ ಬಂದ ಯುವತಿಯೊಡನೆ ಡಾಕ್ಟರ್ ಒಬ್ಬರು ಅನುಚಿತವಾಗಿ ವರ್ತಿಸಿದ ಘಟನೆ ಬ್ರಹ್ಮಾವರದ ಸಾಸ್ತಾನದಲ್ಲಿ ನಡೆದಿದೆ.
ಸಾಸ್ತಾನದ ಸ್ಥಳೀಯ ನಿವಾಸಿ, ಸದ್ಯ ಮುಂಬೈಯಲ್ಲಿ ವಾಸವಿರುವ ಸುಮಾರು 20 ವರ್ಷ ಪ್ರಾಯದ ಯುವತಿಯೊಬ್ಬಳು ಅನಾರೋಗ್ಯದ ಕಾರಣಕ್ಕೆ ತಪಾಸಣೆಗೆಂದು ಸಾಸ್ತಾನದಲ್ಲಿರುವ ಉಪಾಧ್ಯಾಯ ಕ್ಲಿನಿಕ್ ಗೆ ಹೋಗಿದ್ದಾರೆ. ಆಗ ಅಲ್ಲಿನ ಡಾಕ್ಟರ್ ರಾಘವೇಂದ್ರ ಉಪಾಧ್ಯಾಯ ಯುವತಿಯೊಡನೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಯುವತಿ ಮನೆಗೆ ಹೋಗಿ ವಿಷಯ ತಿಳಿಸಿದ್ದು, ಸ್ಥಳೀಯರೆಲ್ಲ ಸೇರಿ ಸಂಜೆ ಡಾಕ್ಟರ್ ಬರುವ ವೇಳೆಗೆ ಕಾದು ಡಾಕ್ಟರ್ ರಾಘವೇಂದ್ರ ಉಪಾಧ್ಯಾಯ ಅವರನ್ನು ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ.
ನಂತರ ಕೋಟ ಪೊಲೀಸರು ಸ್ಥಳಕ್ಕಾಗಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಕೋಟ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

