ಬೆಂಗಳೂರು: ಸಾರ್ವಜನಿಕರು ಅವರ ಸಮಸ್ಯೆಗಳನ್ನು ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದಾಗ ಅವರೊಂದಿಗೆ ಸೌಜನ್ಯತೆಯಿಂದ ವರ್ತಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ರಾಜ್ಯದ ಮುಖ್ಯ ಆರಕ್ಷಕ ಮಹಾನಿರೀಕ್ಷಕರು ಖಡಕ್ ಆದೇಶವೊಂದನ್ನು ಹೊರಡಿಸಿದ್ದಾರೆ.
ಪೊಲೀಸ್ ಆಯುಕ್ತರು, ವಲಯಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷರುಗಳಿಗೆ ಯಾವುದೇ ಸಾರ್ವಜನಿಕರು ಠಾಣೆಗೆ ಬಂದಾಗ ಅವರ ಜೊತೆ ಅನುಚಿತವಾಗಿ ವರ್ತಿಸದಂತೆ ಹಾಗೂ ಅವರ ಮಾನವ ಹಕ್ಕುಗಳಿಗೆ ದಕ್ಕೆಯಾಗದಂತೆ ನಡೆದುಕೊಳ್ಳುವಂತೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಆದೇಶಿಸಲಾಗಿದೆ.
ಆದ್ದರಿಂದ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಆದೇಶದಂತೆ ಜನರಲ್ಲಿ ಸೌಜನ್ಯತೆಯಿಂದ ವರ್ತಿಸಬೇಕು ಎಂದು ಆರಕ್ಷಕ ಮಹಾನಿರೀಕ್ಷಕರ ಪರವಾಗಿ ಮಹಾನಿರ್ದೇಶಕರಾಗಿರುವ ಐಪಿಎಸ್ ದೇವಜ್ಯೋತಿ ರೇ ಅವರು ಪ್ರಕಟಣೆಯ ಮುಖೇನ ಸೂಚನೆ ನೀಡಿದ್ದಾರೆ.


