ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಚಾರದಲ್ಲಿ ವಿಮರ್ಶೆ ಮಾಡದೆ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡುವವರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಖ್ಯಾತ ಗಾಯಕರು, ಸೆಲೆಬ್ರಿಟಿಗಳೂ ಹೊರತಲ್ಲ ಬಿಡಿ. ಪ್ರಸಿದ್ಧ ಗಾಯಕಿ ಹಾಗೂ ನಿರೂಪಕಿ ಆಗಿರುವ ಅರ್ಚನಾ ಉಡುಪ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದು ಹಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಹರಡುತ್ತಿರುವ ವದಂತಿಯನ್ನು ಸಹಿಸಲಾರದೆ ಖುದ್ದಾಗಿ ಅವರೇ ವೀಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.
ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು ನನ್ನನ್ನು ಇದು ಬಹಳ ದಿನಗಳಿಂದ ಕಾಡುತ್ತಿದೆ. ಮನಸ್ಸಿಗೆ ಅತ್ಯಂತ ನೋವಾಗಿದೆ. ಮಾನಸಿಕ ಕಿರಿಕಿರಿ ಹೆಚ್ಚಾಗುತ್ತಿರುವುದರಿಂದ ನಾನೇ ವೀಡಿಯೋ ಮಾಡಿದ್ದೇನೆ. ನಾನು ನಾಲ್ಕೈದು ವರ್ಷಗಳ ಹಿಂದೆ ಒಂದು ಸಂದರ್ಶನದಲ್ಲಿ ಇಪ್ಪತ್ತು ವರ್ಷದ ಹಿಂದೆ ನನಗೆ ಗಂಟಲಿನ ಸಮಸ್ಯೆ ಉಂಟಾಗಿ ಕೆಲವು ತಿಂಗಳು ಹಾಡಲು ಆಗುತ್ತಿರಲಿಲ್ಲ. ಮತ್ತೆ ಅದರಿಂದ ಹೇಗೆ ಸುಧಾರಿಸಿಕೊಂಡೆ ಎಂಬುದನ್ನು ಹೇಳಿದ್ದೆ.
ಆದರೆ ಅಷ್ಟೇ ಕ್ಲಿಪ್ ತೆಗೆದುಕೊಂಡು ನನಗೆ ಕ್ಯಾನ್ಸರ್ ಬಂದಿದೆ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ…ಧಾರವಾಹಿಗೆಂದು ಹೇರ್ ಕಟ್ ಮಾಡಿಸಿದ್ರೆ ಅದ್ರಲ್ಲೂ ಲೋಪ ಹುಡುಕ್ತಾರೆ. ಪ್ಲೀಸ್ ಹಾಗೆಲ್ಲ ಮಾಡ್ಬೇಡಿ ಎಂದು ವೀಡಿಯೋ ಮುಖೇನ ಮನವಿ ಮಾಡಿಕೊಂಡಿದ್ದಾರೆ.


