ಉಪ್ಪಿನಂಗಡಿ: ದೇವರಿಗೆ ಮನುಷ್ಯನ ಪರಿಶುದ್ಧ ಭಕ್ತಿ ಮುಖ್ಯವಾಗುತ್ತೆ ಹೊರತು ಆತನ ಜಾತಿ, ಧರ್ಮವಲ್ಲ. ಈ ಮಾತು ಉಪ್ಪಿನಂಗಡಿಯ ಮಹಾಕಾಳಿ ದೇವಸ್ಥಾನದಲ್ಲಿ ನಿನ್ನೆ ಮತ್ತೆ ಸಾಬೀತಾಗಿದೆ. ಇಬ್ಬರು ಮುಸ್ಲಿಂ ಯುವಕರ ಬೇಡಿಕೆಗೆ ಇಲ್ಲಿನ ದೇವರು ಅಸ್ತು ಎಂದಿರುವ ಘಟನೆ ರೋಮಾಂಚನಕಾರಿಯಾಗಿದೆ.
ಇಬ್ಬರು ಮುಸ್ಲಿಂ ಯುವಕರು ಸನ್ನಿಧಾನಕ್ಕೆ ಬಂದು ದೇಗುಲದ ಅರ್ಚಕರಲ್ಲಿ ಮಾತುಕತೆ ನಡೆಸಿ ತಾವು ಹೊತ್ತಿರುವ ಹರಕೆಯ ಬಗ್ಗೆ ತಿಳಿಸಿದ್ದಾರೆ. ನಂತರ ತಾವು ತಂದಿದ್ದ ಹತ್ತರಿಂದ ಹದಿನೈದು ತೆಂಗಿನಕಾಯಿಯನ್ನು ಅರ್ಚಕರ ಮಾರ್ಗದರ್ಶನದಂತೆ ನದಿಗೆ ಇಳಿಯುವ ಮೆಟ್ಟಿಲುಗಳ ಬಳಿ ಒಂದೊಂದಾಗಿ ಒಡೆದಿದ್ದಾರೆ.
ಅಚ್ಚರಿ ಎಂದರೆ ಇವರು ಒಡೆದ ಎಲ್ಲಾ ತೆಂಗಿನಕಾಯಿಯೂ ಮೇಲ್ಮುಖವಾಗಿಯೇ ಬಿದ್ದಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ಈ ರೀತಿ ಬಿದ್ದರೆ ಶುಭ ಶಕುನವೆಂದು ಅರ್ಥ. ಮನೆಯಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭವೊಂದು ನಿರ್ವಿಘ್ನವಾಗಿ ನಡೆಯಲು ಹರಕೆ ಹೊತ್ತಿಕೊಂಡಿದ್ದರು. ಅದು ಆದ ಹಿನ್ನೆಲೆ ಕೃತಜ್ಞತಾಪೂರ್ವಕವಾಗಿ ಹರಕೆ ಸಲ್ಲಿಸಿದ್ದಾರೆ. ಈ ಸಂಗತಿ ಕೇಳಿ ಜನರು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

