ನವದೆಹಲಿ: ಈಗಾಗಲೇ ಬೇಸಿಗೆಕಾಲ ಮುಕ್ತಾಯಗೊಂಡು ವರುಣನಾರ್ಭಟ ಶುರುವಾಗಿದೆ. ಕರಾವಳಿಯಲ್ಲಿ ಕೂಡಾ ವರುಣಧಾರೆ ಅನೇಕ ಅವಾಂತರಕ್ಕೆ ಕಾರಣವಾಗಿದೆ. ಇದೀಗ ಆಲಿಕಲ್ಲು ಮಳೆ ಸುರಿಯುತ್ತಿರುವಾಗಲೇ ಸುಮಾರು ಇನ್ನೂರು ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೋ ವಿಮಾನವೊಂದು ದೊಡ್ಡ ಅನಾಹುತದಿಂದ ಪಾರಾಗಿದೆ. ವಿಮಾನದ ಮುಂದಿನ ಭಾಗ ಮಾತ್ರ ಸಂಪೂರ್ಣ ಹಾನಿಯಾಗಿದೆ.
ದೆಹಲಿಯಿಂದ ಜಮ್ಮುಕಾಶ್ಮೀರದ ಶ್ರೀನಗರಕ್ಕೆ ವಿಮಾನ ಪ್ರಯಾಣ ಬೆಳೆಸಿತ್ತು. ವಿಮಾನ ಆಕಾಶದಲ್ಲಿ ಇರುವಾಗಲೇ ಜೋರಾಗಿ ಆಲಿಕಲ್ಲು ಮಳೆ ಶುರುವಾಗಿದೆ. ಇದರ ಜೊತೆಗೆ ಗಾಳಿಯೂ ಆರಂಭವಾದದ್ದರಿಂದ ವಿಮಾನ ಅಲುಗಾಡಿದ್ದು ಒಳಗಿದ್ದ ಪ್ರಯಾಣಿಕರು ಭಯದಿಂದ ಚೀರಾಡಿದ್ದಾರೆ.
ಬದುಕುವುದೇ ಡೌಟು ಎಂಬ ಕಲ್ಪನೆಗೆ ಬಂದ ಪ್ರಯಾಣಿಕರು ಕೂಗಾಟ ನಡೆಸಿದ್ದು ಪ್ರಕ್ಷುಬ್ಧ ಹವಾಮಾನದಿಂದಾಗಿ ಪೈಲೆಟ್ ತುರ್ತು ವರದಿ ಮಾಡಿದ್ದಾರೆ. ಅದರ ಬೆನ್ನಲ್ಲೇ ಕೊನೆಗೂ ವಿಮಾನ ಯಾವುದೇ ಅಪಾಯವಿಲ್ಲದೆ ಸಂಜೆ ಲ್ಯಾಂಡ್ ಆಗಿದೆ.

