ಬಂಟ್ವಾಳ: ಮೊನ್ನೆ ತಾನೇ ಪಾಣೆಮಂಗಳೂರಿನ ಸೇತುವೆಯ ಕೆಳಭಾಗದಲ್ಲಿ ಪತ್ತೆಯಾದ ನಗರಸಭಾ ಸದಸ್ಯ ರಮೇಶ್ ರೈ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅವರ ಆತ್ಮಹತ್ಯೆ ಹಿಂದೆ ಯಾರದ್ದೋ ಕೈವಾಡವಿದೆ ಎಂದು ಆರೋಪಿಸಿ ಸಮಗ್ರ ತನಿಖೆಗೆ ಮಗ ವಿನೀಶ್ ರೈ ಅವರು ದೂರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿನೀಶ್ ರೈ ನನ್ನ ತಂದೆ ದೃಢ ಮನಸ್ಸಿನ ಸಮಾಜಮುಖಿ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ದುರ್ಬಲ ಮನಸ್ಸಿನವರಲ್ಲ. ಕಳೆದ ಅನೇಕ ದಿನಗಳಿಂದ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು.
ಬೆದರಿಕೆ ಕರೆಗಳಿಂದ ತೀವ್ರ ಮಾನಸಿಕ ಒತ್ತಡಗೊಳಗಾಗಿದ್ದರು. ನೀಡಿರುವ ಸಾಕ್ಷಿಯ ಮೂಲಕ ಆ ಕರೆ ಮಾಡುತ್ತಿದ್ದವರು ಯಾರು ಎಂದು ತನಿಖೆ ನಡೆಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

