ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಹೃದಯಾಘಾತ ಸಮಸ್ಯೆ ಕಾಣಿಸಿಕೊಳ್ಳೋದು ಸಹಜವಾಗಿ ಬಿಟ್ಟಿದೆ. ಹೀಗಿರುವಾಗ ಸಾಮಾನ್ಯವಾಗಿ ಹಠಾತ್ ಎದೆನೋವು ಕಾಣಿಸಿಕೊಂಡರೆ ಭಯವಾಗಿ ಬಿಡುತ್ತದೆ. ಇದೇನು ಹಾರ್ಟ್ ಅಟ್ಯಾಕ್ ಲಕ್ಷ್ಮಣನಾ ಅಂತ ಯೋಚಿಸ್ತೇವೆ. ಆದರೆ ಇದು ಗ್ಯಾಸ್ಟ್ರಿಕ್ ಸಮಸ್ಯೆ ಕೂಡಾ ಆಗಿರುತ್ತದೆ.
ಹಾಗಾದ್ರೆ ಎದೆನೋವು ಶುರುವಾದಾಗ ಇದು ಗ್ಯಾಸ್ಟ್ರಿಕ್ ಸಮಸ್ಯೆನಾ ಅಥವಾ ಹಾರ್ಟ್ ಅಟ್ಯಾಕ್ ಲಕ್ಷಣನಾ ಎಂಬ ದ್ವಂದ್ವ ಕಾಡುತ್ತದೆ. ಎಲ್ಲಾ ರೀತಿಯ ಎದೆನೋವುಗಳು ಹೃದಯಕ್ಕೆ ಸಂಬಂಧಿಸಿರುವುದಿಲ್ಲ.
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಹೃದಯದ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರ ಲಕ್ಷಣಗಳೆಂದರೆ ಹೊಟ್ಟೆ ಉಬ್ಬುವುದು, ಹೊಟ್ಟೆ ಸೀಳುವಂತೆ ಒತ್ತಡದ ಅನುಭವ, ಎದೆಯಲ್ಲಿ ಚುಚ್ಚುವ ಅನುಭವ, ಹೊಟ್ಟೆಯಲ್ಲಿ ಗಾಳಿ ಚಲಿಸುವ ಸಂವೇದನೆ, ಉಬ್ಬಸ, ಉಸಿರಾಟದ ತೊಂದರೆ ಇತ್ಯಾದಿ.
ಇನ್ನು ಹೃದಯಾಘಾತದ ಲಕ್ಷಣವಿದ್ರೆ ಎದೆಯ ಮಧ್ಯಭಾಗದಲ್ಲಿ ನೋವು, ಅತಿಯಾಗಿ ಬೆವರುವುದು, ವಾಕರಿಕೆ, ತಲೆನೋವು, ತಲೆ ತಿರುಗುವುದು, ಕುತ್ತಿಗೆ, ದವಡೆಯಲ್ಲಿ ನೋವು ಹರಡುವುದು, ಮಸುಕಾದ ದೃಷ್ಟಿ ಈ ಎಲ್ಲಾ ಲಕ್ಷಣಗಳು ಬಂದ್ರೆ ದಯವಿಟ್ಟು ಜಾಗರೂಕರಾಗಿರಿ. ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ದಿಢೀರ್ ಆಗಿ ಎದೆಯಲ್ಲಿ ಅಸಹಜ ನೋವು ಕಂಡುಬಂದರೆ ಅದನ್ನು ಗ್ಯಾಸ್ಟ್ರಿಕ್ ಇರಬಹುದೆಂದು ನೀವೇ ಊಹಿಸಿ ನಿರ್ಲಕ್ಷಿಸಿ ಬಿಡಬೇಡಿ. ನೋವಿನ ತೀವ್ರತೆ, ನೋವು ದೇಹದ ಇತರ ಭಾಗಕ್ಕೆ ಹರಡುತ್ತಿದೆಯೋ ಎಂದು ಗಮನಿಸಿ ವೈದ್ಯರನ್ನು ಭೇಟಿಯಾಗಿ.

