ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಗರ್ಭಿಣಿ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೈದ ಆಘಾತಕಾರಿ ಘಟನೆ ಬಂಟ್ವಾಳದ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ನಡೆದಿದೆ. ತಿಮ್ಮಪ್ಪ ರಾಮ ಮೂಲ್ಯ ಪತ್ನಿಯನ್ನು ಕೊಲೆಗೈದು ನೇಣಿಗೆ ಶರಣಾದ ವ್ಯಕ್ತಿ. ಪತ್ನಿ ಜಯಂತಿ ಹತ್ಯೆಗೀಡಾದ ಮಹಿಳೆ.
ರಾತ್ರಿ ದಂಪತಿ ಜಗಳವಾಡಿ ಆ ಗಲಾಟೆ ವಿಕೋಪಕ್ಕೇರಿ ಜಯಂತಿ ಅವರಿಗೆ ಹಲ್ಲೆ ಮಾಡಿ ಕತ್ತು ಹಿಚುಕಿ ಸಾಯಿಸಿದ್ದಾರೆ. ನಂತರ ತಿಮ್ಮಪ್ಪ ಅವರು ಅಡುಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರಿಗೆ ಮದ್ವೆ ಆಗಿ ಹದಿನೈದು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಜಯಂತಿ ಇತ್ತೀಚೆಗೆ ಗರ್ಭಿಣಿಯಾಗಿದ್ದರು. ಜುಲೈ ಎರಡರಂದು ಸೀಮಂತ ಕಾರ್ಯಕ್ರಮವೂ ನಿಗದಿಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

