ಮಂಗಳೂರು: ಗ್ರಾಹಕರು ಅಡವಿಟ್ಟಿದ್ದ ಆರು ಕೆಜಿ ಚಿನ್ನವನ್ನು ಅದೇ ಬ್ಯಾಂಕಿನ ಕ್ಯಾಷಿಯರ್ ನೋರ್ವ ಎಗರಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಶಕ್ತಿನಗರದಲ್ಲಿರುವ ಪದುವ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಾವಿರಾರು ಗ್ರಾಹಕರ ನಂಬಿಕೆ ಗಳಿಸಿದ್ದ ಬ್ಯಾಂಕ್, ಇದೀಗ ಭಾರೀ ವಂಚನೆಯಿಂದ ಸುದ್ದಿಯಾಗಿದೆ. ಇಲ್ಲಿನ ಗ್ರಾಹಕರ ಪಾಲಿಗೆ ವಿಶ್ವಾಸದ ಪ್ರತೀಕವಾಗಿದ್ದ ಕ್ಯಾಷಿಯರ್ ಪ್ರೀತೇಶ್ ಗ್ರಾಹಕರು ತಮ್ಮ ಕಷ್ಟಕ್ಕೆಂದು ಅಡವಿಟ್ಟ ಚಿನ್ನವನ್ನೇ ಈತ ಲಪಟಾಯಿಸಿದ್ದಾನೆ.
ನಕಲಿ ದಾಖಲೆ ಸೃಷ್ಟಿಸಿ, ಲಾಕರ್ನಲ್ಲಿದ್ದ ಚಿನ್ನವನ್ನೇ ಎಗರಿಸಿದ್ದಾನೆ. ಹೀಗೆ ಬರೋಬ್ಬರಿ 26 ಗ್ರಾಹಕರ ಸುಮಾರು ಆರೂವರೆ ಕೆಜಿ ಚಿನ್ನಕ್ಕೆ ನಾಮ ಹಾಕಿದ್ದಾನೆ.
ಬ್ಯಾಂಕ್ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆ, ಪ್ರೀತೇಶ್ಗೆ ತಾನು ಸಿಕ್ಕಿಬೀಳುವ ಭಯ ಶುರುವಾಗಿತ್ತು. ಕದ್ದ ಚಿನ್ನದ ಪೈಕಿ 2.3 ಕೆಜಿ ಚಿನ್ನವನ್ನ ಬೇರೊಂದು ಬ್ಯಾಂಕ್ನಲ್ಲಿ ಅಡವಿಟ್ಟು ಬರೋಬ್ಬರಿ 2.5 ಕೋಟಿ ರೂಪಾಯಿ ಸಾಲ ಪಡೆದಿದ್ದ. ಈ ಕಳ್ಳಾಟದಲ್ಲಿ ಪ್ರೀತೇಶ್ಗೆ ಶೇಖ್ ಮಹಮ್ಮದ್ ಎಂಬಾತನೂ ಸಾಥ್ ಕೊಟ್ಟಿದ್ದ. ಪೊಲೀಸರು ಇದೀಗ ಆತನನ್ನೂ ಬಂಧಿಸಿದ್ದಾರೆ. ಪೊಲೀಸರು ಮಹಮ್ಮದ್ನಿಂದ ಬರೋಬ್ಬರಿ ನಾಲ್ಕೂವರೆ ಕೆಜಿ ನಕಲಿ ಚಿನ್ನ ವಶಕ್ಕೆ ಪಡೆದಿದ್ದಾರೆ.

